ಕೊನೆಗೂ ಫಾರ್ಮ್‌ಗೆ ಮರಳಿದ ಸೂರ್ಯಕುಮಾರ್ ಯಾದವ್; ಕೆಕೆಆರ್ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್
ಮುಂಬೈ: ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ಸುಲಭ ಜಯ ಸಾಧಿಸಿದೆ. ಐದು ವಿಕೆಟ್ ಅಂತರದ ಗೆದ್ದ ಮುಂಬೈ ತಂಡವು ವಾಂಖೆಡೆಯಲ್ಲಿ ಮತ್ತೊಂದು ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕೆಕೆಆರ್ ಆರು ವಿಕೆಟ್ ನಷ್ಟಕ್ಕೆ 185 ರನ್ ಮಾಡಿದರೆ, ಮುಂಬೈ ತಂಡವು 17.4 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ಬೆನ್ನತ್ತಿತು.
ಕೆಕೆಆರ್ ಪರ ವೆಂಕಟೇಶ್ ಅಯ್ಯರ್ ಅದ್ಭುತ ಇನ್ನಿಂಗ್ ಆಡಿದರು. ಚೊಚ್ಚಲ ಶತಕ ಬಾರಿಸಿದ ಅಯ್ಯರ್ 9 ಸಿಕ್ಸರ್ ನೆರವಿನಿಂದ 104 ರನ್ ಬಾರಿಸಿದರು. ಉಳಿದಂತೆ ರಸೆಲ್ 21 ರನ್, ರಿಂಕು 18 ರನ್ ಮಾಡಿದರು. ಮುಂಬೈ ಪರ ಶೊಕೀನ್ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಮುಂಬೈಗೆ ಉತ್ತಮ ಆರಂಭ ಸಿಕ್ಕಿತು. ಇಶಾನ್ ಕಿಶನ್ 25 ಎಸೆತದಲ್ಲಿ 58 ರನ್ ಮತ್ತು ರೋಹಿತ್ 20 ರನ್ ಮಾಡಿದರು. ಫಾರ್ಮ್ ಗೆ ಮರಳಿದ ಸೂರ್ಯಕುಮಾರ್ ಯಾದವ್ 43 ರನ್, ತಿಲಕ್ ವರ್ಮಾ 30 ರನ್ ಮಾಡಿದರು. ಕೊನೆಯಲ್ಲಿ ಡೇವಿಡ್ ಅಜೇಯ 24 ರನ್ ಗಳಿಸಿದರು.