ಕೊಡಗಿನಲ್ಲಿ ಸುಸ್ಥಿರ ಪ್ರವಾಸೋದ್ಯಮ ಗಮನದಲ್ಲಿಟ್ಟುಕೊಂಡು ಕುಶಾಲನಗರದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಗ್ರೀನ್ ಕೆಎಸ್ಆರ್ಟಿಸಿ ಡಿಪೋ ಆರಂಭಕ್ಕೆ ಚಿಂತನೆ: ಡಾ.ಮಂತರ್ ಗೌಡ
ಸೋಮವಾರಪೇಟೆ: ಕೊಡಗಿನ ಪ್ರವಾಸೂದ್ಯಮ ಸಾವಿರಾರು ಮಂದಿಗೆ ಉದ್ಯೋಗವಕಾಶ ಒದಗಿಸಿದೆ. ಪ್ರವಾಸೋದ್ಯಮ ಉಳಿಯಬೇಕು ಅದೇ ರೀತಿ ಕೊಡಗಿನ ಶ್ರೀಮಂತ ಪರಿಸರವು ಉಳಿಯಬೇಕು. ಈ ನಿಟ್ಟಿನಲ್ಲಿ ನಾವು ಪರಿಸರ ಪೂರಕ, ಸುಸ್ಥಿರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ನೆಲೆಯಲ್ಲಿ ಕುಶಾಲನಗರದಲ್ಲಿ ಆರಂಭಗೊಳ್ಳುವ ಕೆ ಎಸ್ ಆರ್ ಟಿ ಡಿಪೋ ವನ್ನು ಗ್ರೀನ್ ಡಿಪೋವನ್ನಾಗಿ ಮಾರ್ಪಡಿಸಲು ಚಿಂತನೆ ನಡೆದಿದೆ ಎಂದು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಹೇಳಿದ್ದಾರೆ.
ಅವರ ಸೋಮವಾರಪೇಟೆಯ ಪತ್ರಕರ್ತರ ಸಂವಾದದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಈ ಗ್ರೀನ್ ಡಿಪೋ ರಾಜ್ಯದಲ್ಲಿ ಪ್ರಥಮವಾಗಿ ಒಂದು ಜಿಲ್ಲೆಯ ಸ್ಥಳದಲ್ಲಿ ಆರಂಭಗೊಳ್ಳುತ್ತಿದೆ. ರಾಜ್ಯದಲ್ಲಿ ಇದು ಪ್ರಥಮ ಪ್ರಯೋಗ ಈ ನೆಲೆಯಲ್ಲಿ ನಾವು ಹೆಚ್ಚಿನ ಎಲೆಕ್ಟ್ರಿಕಲ್ ಬಸ್ಸುಗಳನ್ನು ಈ ಭಾಗದಲ್ಲಿ ಓಡಿಸಲಿದ್ದೇವೆ ಎಂದು ಅವರು ಸಂವಾದದಲ್ಲಿ ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಪ್ರವಾಸೋದ್ಯಮವನ್ನು ಪರಿಸರ ಪೂರಕವಾಗಿ ನಾವು ನಡೆಸಬೇಕಾಗಿದೆ. ಭವಿಷ್ಯದ ಜನಾಂಗಕ್ಕೆ ಪರಿಸರವನ್ನು ಉಳಿಸಬೇಕಾಗಿದೆ. ಅದೇ ರೀತಿ ಉದ್ಯೋಗ ಸೃಷ್ಟಿಯ ಪ್ರವಾಸೋದ್ಯಮವನ್ನು ಬೆಳೆಸಬೇಕಾಗಿದೆ. ಈ ಬಗ್ಗೆ ನಾವು ವೈಜ್ಞಾನಿಕವಾಗಿ ಚಿಂತಿಸಿ ಹೊಸ ಪರಿಹಾರವನ್ನು ಜೊತೆಯಾಗಿ ಕಂಡುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡವರು, ನಾಗರಿಕರು, ಪತ್ರಕರ್ತರು ಎಲ್ಲರೂ ಜೊತೆಯಾಗಿ ಪರಿಸರಕ್ಕೆ ಪೂರಕವಾಗಿ ಪ್ರವಾಸೋದ್ಯಮವನ್ನು ಬೆಳೆಸಬೇಕಾಗಿದೆ. ಪರಿಸರವನ್ನ ಹಾಳು ಮಾಡದಿರುವ ಪ್ರವಾಸೋದ್ಯಮ ನಮ್ಮದಾಗಬೇಕಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಇದಕ್ಕಾಗಿ ಸರ್ವರ ಸಹಕಾರ ಅಗತ್ಯ ಇದೆ ಎಂದು ಹೇಳಿದ್ದಾರೆ.
ಬೆಂಗಳೂರು 2ನೇ ವಿಮಾನ ನಿಲ್ದಾಣ: ವಾರದಲ್ಲಿ ತೀರ್ಮಾನ ಎಂದ ಸರ್ಕಾರ
ಬೆಂಗಳೂರು: ಬೆಂಗಳೂರಿನ ಉದ್ದೇಶಿತ 2ನೇ ವಿಮಾನ ನಿಲ್ದಾಣಕ್ಕಾಗಿ ಅಂತಿಮ ಸುತ್ತಿನಲ್ಲಿ 5 ಸ್ಥಳಗಳನ್ನು ಗುರುತಿಸಲಾಗಿದ್ದು, ಒಂದು ವಾರದಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಶುಕ್ರವಾರ ಅವರು ತಮ್ಮ ಕಚೇರಿಯಲ್ಲಿ ಕರೆದಿದ್ದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದು, ‘ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಸಾರ್ವಜನಿಕರು ಮತ್ತು ಉದ್ಯಮಗಳಿಗೆ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ.
ಇದಕ್ಕಾಗಿ ಸರಕಾರವು ಐದು ಸ್ಥಳಗಳನ್ನು ಗುರುತಿಸಿದೆ. ಆದರೆ ಇವುಗಳ ಪೈಕಿ ಯಾವುದನ್ನೂ ಆಖೈರು ಮಾಡಿಲ್ಲ. ಈ ಸಂಬಂಧ ಇನ್ನೊಂದು ವಾರದಲ್ಲಿ ಸಭೆ ಸೇರಿ, ಅಂತಿಮ ತೀರ್ಮಾನಕ್ಕೆ ಬರಲಾಗುವುದು’ ಎಂದು ತಿಳಿಸಿದ್ದಾರೆ.
ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಈಗಾಗಲೇ ತೀರ್ಮಾನಿಸಲಾಗಿದೆ ಎನ್ನುವ ವರದಿಗಳಿಗೆ ಆಧಾರವಿಲ್ಲ. ಡಾಬಸ್ ಪೇಟೆ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಸೇರಿದಂತೆ ಒಟ್ಟು ಐದು ಸ್ಥಳಗಳನ್ನು ನಾವು ಮುಕ್ತವಾಗಿ ಇಟ್ಟುಕೊಂಡಿದ್ದೇವೆ.
ಇವತ್ತು ಇನ್ನೂ ಒಂದು ಸ್ಥಳದ ಬಗ್ಗೆಯೂ ಚರ್ಚೆ ಆಗಿದೆ. ಇವುಗಳ ಬಗ್ಗೆ ವಸ್ತುಸ್ಥಿತಿ ಆಧರಿಸಿ ಮತ್ತು ಸಾಧಕ-ಬಾಧಕಗಳನ್ನು ಗಮನಿಸಿ, ವರದಿ ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಮತ್ತೊಂದು ಸುತ್ತು ಸಭೆ ಸೇರಿ, ಸ್ಥಳವನ್ನು ಆಖೈರುಗೊಳಿಸಲಾಗುವುದು’ ಎಂದು ಸಚಿವರು ವಿವರಿಸಿದರು.
ರಾಜಕೀಯ ಹಿತಾಸಕ್ತಿ ಇಲ್ಲ
ಇದೇ ವೇಳೆ ವಿಮಾನ ನಿಲ್ದಾಣಕ್ಕೆ ಸ್ಥಳ ಆಯ್ಕೆ ಮಾಡುವಲ್ಲಿ ಯಾರಿಗೂ ರಾಜಕೀಯ ಹಿತಾಸಕ್ತಿಗಳೇನಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ‘ಬೆಂಗಳೂರಿನ ಜನತೆಗೆ ಮತ್ತು ಉದ್ಯಮಿಗಳ ಅನುಕೂಲವಷ್ಟೇ ಇಲ್ಲಿ ಮುಖ್ಯ. ಇದರಿಂದ ನಮ್ಮ ಆರ್ಥಿಕ ಬೆಳವಣಿಗೆಗೆ ಒಳ್ಳೆಯ ಕೊಡುಗೆ ಬರಬೇಕು.
ಇದರ ಜೊತೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಅಂತಿಮವಾಗಿ ಬೆಂಗಳೂರು ನಗರವು ಇನ್ನೊಂದು ಸ್ತರಕ್ಕೆ ಏರಬೇಕು ಎನ್ನುವುದಷ್ಟೇ ಸರ್ಕಾರದ ಗುರಿಯಾಗಿದೆ. ಎರಡನೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮಗೆ ಸ್ಥಳಾವಕಾಶಕ್ಕೇನೂ ಕೊರತೆ ಇಲ್ಲ. ಬೆಂಗಳೂರಿನ ಸುತ್ತಮುತ್ತಲೂ ಜಾಗವಿದ್ದು, ಇದರಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಇನ್ನು ಮೆಟ್ರೋ ರೈಲು ಸಂಸ್ಥೆಯವರು (ಬಿಎಂಆರ್ಸಿಎಲ್) ಹೆಬ್ಬಾಳದ ಬಳಿ ಬಹುಮಾದರಿ ಸಾರಿಗೆ ಜಂಕ್ಷನ್ ರೂಪಿಸಲು 45 ಎಕರೆ ಜಾಗ ಕೇಳಿದ್ದಾರೆ. ಆದರೆ, ಆ ಜಾಗ ಕೆಐಎಡಿಬಿ ವಶದಲ್ಲಿಲ್ಲ. ಅದನ್ನು 2001ರಲ್ಲಿಯೇ `ಸಿಂಗಲ್ ಯೂನಿಟ್ ಕಾಂಪ್ಲೆಕ್ಸ್’ ಪರಿಕಲ್ಪನೆಯಡಿ ಖಾಸಗಿ ಸಂಸ್ಥೆಗೆ ಸ್ವಾಧೀನಪಡಿಸಿ ಕೊಡಲಾಗಿದೆ. ಆದ್ದರಿಂದ ಮೆಟ್ರೋ ನಿಗಮಕ್ಕೆ ಆ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲು ತಿಳಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು.
ಬೆಂಗಳೂರಿನಲ್ಲಿ ಸುಗಮ ಸಂಚಾರ ವ್ಯವಸ್ಥೆ ಬರಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಆದರೆ, ಮೆಟ್ರೋದವರು ಕೇಳಿರುವ ಜಾಗ ಖಾಸಗಿಯವರ ಸ್ವತ್ತಾಗಿದೆ. ಇದರಲ್ಲಿ ಕೆಐಎಡಿಬಿ ಪಾತ್ರವೇನೂ ಇಲ್ಲ. ಬಹುಮಾದರಿ ಸಾರಿಗೆ ಸಂಕೀರ್ಣವು ಒಂದೇ ಕಡೆ ಬಂದರೆ ಜನರಿಗೂ ಅನುಕೂಲವಾಗಲಿದೆ. ಇದರಿಂದ ವಾಹನ ದಟ್ಟಣೆಯೂ ಕಡಿಮೆಯಾಗುವ ಸಂಭವವಿದೆ ಎಂದು ಅವರು ಹೇಳಿದರು.
ಶುಕ್ರವಾರ ನಡೆದ ಈ ಮಹತ್ವದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್ ಮಂಜುಳಾ, ಕೆಐಎಡಿಬಿ ಸಿಇಒ ಡಾ.ಮಹೇಶ, ಸೇರಿದಂತೆ ಮತ್ತಿತರರು ಇದ್ದರು.