ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವು
ಚಿಕ್ಕಮಗಳೂರು: ಕೇದಾರನಾಥ ಯಾತ್ರೆಗೆ (Kedarnath Yatra) ತೆರಳಿದ್ದ ಚಿಕ್ಕಮಗಳೂರು (Chikkamagaluru) ಮೂಲದ ಯುವಕನೊಬ್ಬ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೂಡಿಗೆರೆ (Mudigere) ತಾಲೂಕು ಜನ್ನಾಪುರ ಗ್ರಾಮದ ಗಿರೀಶ್ (25) ಮೃತಪಟ್ಟ ಯುವಕ. ಕಳೆದ ವಾರ ಮೂಡಿಗೆರೆಯಿಂದ ಗಿರೀಶ್ ಕೇದಾರನಾಥ ಯಾತ್ರೆಗೆ ತೆರಳಿದ್ದ. ದುರಾದೃಷ್ಟವಶಾತ್ ಆತ ಕೇದಾರನಾಥದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ಗಿರೀಶ್ ಕುಟುಂಬಸ್ಥರಿಗೆ ಕೇದಾರನಾಥ ಪೊಲೀಸರು ಮಾಹಿತಿ ನೀಡಿದ್ದಾರೆ.
ಗಿರೀಶ್ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದ. ಪ್ರಸ್ತುತ ಗಿರೀಶ್ ಮೃತದೇಹ ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿದೆ.
ಮೊಬೈಲ್ ಚಾರ್ಜರ್ ಕೊಡ್ಲಿಲ್ಲ ಎಂದು ನೇಣಿಗೆ ಶರಣಾದ ಯುವಕ
ತುಮಕೂರು: ಮೊಬೈಲ್ ಚಾರ್ಜರ್ (Mobile Charger) ಕೊಡಲಿಲ್ಲ ಎಂದು ಯುವಕ ನೇಣಿಗೆ ಶರಣಾದ ಘಟನೆ ತುಮಕೂರು (Tumakuru) ಜಿಲ್ಲೆಯ ಪಾವಗಡ (Pavagada) ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿ ಹಳ್ಳಿಯಲ್ಲಿ ನಡೆದಿದೆ.
ನಿಖಿಲ್ (18) ನೇಣಿಗೆ ಶರಣಾದ ಯುವಕ. ಮೃತ ನಿಖಿಲ್ ಆಶಾ ಕಾರ್ಯಾಕರ್ತೆಯಾಗಿರುವ ವರಲಕ್ಷ್ಮಮ್ಮ ಎಂಬವರ ಪುತ್ರನಾಗಿದ್ದು, ಪಾವಗಡ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ.
ಘಟನೆಯ ಮೊದಲು ಯುವಕ ತಾಯಿಯ ಬಳಿ ನನಗೆ ಚಾರ್ಜರ್ ಕೊಡು ಎಂದಿದ್ದಾನೆ. ಈ ವೇಳೆ ತಾಯಿ ನನ್ನ ಹತ್ತಿರ ಮೊಬೈಲ್ ಚಾರ್ಜರ್ ಇಲ್ಲವೆಂದು ಹೇಳಿ ಅಲ್ಲೇ ಹತ್ತಿರದ ಮನೆಯೊಂದರಲ್ಲಿ ಹೂ ಕಟ್ಟಲು ಹೋಗಿದ್ದಾರೆ.
ವಾಪಸ್ ಮನೆಗೆ ಬಂದು ಬಾಗಿಲು ಬಡಿದಾಗ ನಿಖಿಲ್ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವೈ.ಎನ್.ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.