ಭೀಕರ ಅಪಘಾತ; ಆಟೋಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಸಾವು, ಮೂವರಿಗೆ ಗಾಯ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ(Road Accident) ಸಂಭವಿಸಿದ್ದು, ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನ ಕೆ.ಆರ್.ಪುರಂ ಬಳಿ ತಡರಾತ್ರಿ ಇನೊವಾ ಕಾರು ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಆಟೋ ಚಾಲಕನ ಪತ್ನಿ ತಾಸೀನಾ(24), ಸೋದರಿ ಫಾಝಿಲಾ(38) ಮೃತ ದುರ್ದೈವಿಗಳು. ಆಟೋ ಚಾಲಕ ಖಾಲಿದ್, ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು ಮೂವರು ಗಾಯಾಳುಗಳಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೆ.ಆರ್.ಪುರಂನಿಂದ ಚನ್ನಸಂದ್ರಕ್ಕೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಕೆ.ಆರ್.ಪುರಂ ಬಳಿ ಆಟೋಗೆ ಇನೊವಾ ಕಾರು ಡಿಕ್ಕಿ ಹೊಡೆದು ನಾಪತ್ತೆಯಾಗಿದೆ. ಆಟೋದಲ್ಲಿ ಆಟೋ ಚಾಲಕ ಖಾಲಿದ್, ಪತ್ನಿ ತಾಸೀನಾ, ಇಬ್ಬರು ಮಕ್ಕಳು, ಖಾಲಿದ್ ಸಹೋದರಿ ಫಾಝಿಲಾ ಪ್ರಯಾಣಿಸುತ್ತಿದ್ರು. ಈ ವೇಳೆ ಕಾರು ಡಿಕ್ಕಿಯಾಗಿ ತಾಸೀನಾ, ಫಾಝಿಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದು ಕೆ.ಆರ್.ಪುರಂ ಠಾಣೆಯಲ್ಲಿ ಹಿಟ್ ಌಂಡ್ ರನ್ ಕೇಸ್ ದಾಖಲಾಗಿದೆ.
ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಕೊಲೆ
ಕಲಬುರಗಿ ನಗರದ ಭವಾನಿ ನಗರದ ರಿಂಗ್ ರಸ್ತೆಯಲ್ಲಿ ಜನವರಿ 4ರಂದು ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಕೊಲೆ ಮಾಡಲಾಗಿದೆ. ಕೊಲೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.ಚೆನ್ನವೀರ ನಗರದ ನಿವಾಸಿ ಮಂಜುನಾಥ ಸ್ವಾಮಿ ಎಂಬ ವ್ಯಕ್ತಿ ಅದೇ ಏರಿಯಾದ ಪ್ರಶಾಂತ್ ಕುಂಬಾರ್ ಎನ್ನುವವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.
ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಬರ್ಬರ ಕೊಲೆ ನಡೆದಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಸದ್ಯ ಮಂಜುನಾಥ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ನಗರದ ಚೌಕ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.