ಕೃಷ್ಣಾ ನದಿಯಲ್ಲಿ ದೋಣಿ ಪಲ್ಟಿ; ಈಜಿ ದಡ ಸೇರಿದ ಭಕ್ತಾದಿಗಳು!
ವಿಜಯಪುರ: ಕೃಷ್ಣಾ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಮುಗುಚಿ ಬಿದ್ದಿರುವ ಘಟನೆ ಬಬಲೇಶ್ವರ ತಾಲೂಕಿನ ಬಬಲಾದಿ ಹತ್ತಿರದ ಕೃಷ್ಣಾ ನದಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಆದರೆ ಅದರಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಬಬಲಾದಿ ಸದಾಶಿವ ಮಠಕ್ಕೆ ದರ್ಶನಕ್ಕೆ ಬಂದಿದ್ದ ಬಾಗಲಕೋಟ ಜಿಲ್ಲೆಯ ಭಕ್ತರು ತೆಪ್ಪದ ಸಹಾಯದಿಂದ ಕೃಷ್ಣಾ ನದಿ ದಾಟುತ್ತಿದ್ದರು. ಈ ಹಂತದಲ್ಲಿ ಸಾಮರ್ಥ್ಯ ಮೀರಿ ಭಕ್ತರು ದೋಣಿ ಏರಿದ್ದರಿಂದ ಕೃಷ್ಣಾ ನದಿ ತೀರದಲ್ಲೇ ದೋಣಿ ಪಲ್ಟಿಯಾಗಿದೆ.
ಬಬಲಾದಿಯ ಸದಾಶಿವ ಮಠದ ಜಾತ್ರೆ ಮುಗಿಸಿಕೊಂಡು ಬಬಲಾದಿ ಮತ್ತು ಮುಂಡಗನೂರು ನಡುವೆ ಕೃಷ್ಣಾ ನದಿಯಲ್ಲಿ ದೋಣಿಯಲ್ಲಿ ಭಕ್ತರು ಊರಿಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ದೋಣಿ ವಾಲುತ್ತಲೇ ತೆಪ್ಪದಲ್ಲಿ ಅಂಚಿನಲ್ಲಿ ಕುಳಿತವರು ನದಿಗೆ ಹಾರಿದ್ದು, ಜನರ ಒತ್ತಡಕ್ಕೆ ತೆಪ್ಪ ನದಿಯಲ್ಲಿ ಮುಗುಚಿ ಬಿದ್ದಿದೆ.
ಆದರೆ ನದಿಗೆ ಬಿದ್ದವರು ಹತ್ತಿರದಲ್ಲೇ ನದಿ ತೀರ ಇದ್ದ ಕಾರಣ ಬೇಗನೇ ಈಜಿ ದಡ ಸೇರಿದ್ದಾರೆ. ಇದರಿಂದ ದುರಂತ ತಪ್ಪಿದೆ. ನದಿಯ ಮಧ್ಯಕ್ಕೆ ಹೋದಾಗ ದೋಣಿ ಮುಗುಚಿಕೊಂಡಿದ್ದರೆ ಭಾರೀ ದೊಡ್ಡ ದುರಂತವಾಗುತ್ತಿತ್ತು. ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.