ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಮಗ ಸಾವು
ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದ ಮಗನ ರಕ್ಷಿಸಲು ಹೋದ ತಾಯಿಯೂ ಮಗನ ಜೊತೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.
ಕೋಳೂರು ಗ್ರಾಮದ ರೂಪಾ (35) ಹಾಗೂ ಮಗ (Son) ಹೇಮಂತ್ (9) ಮೃತ ದುರ್ದೈವಿಗಳು. ತಾಯಿ (Mother), ಅಜ್ಜಿ ಜೊತೆ ಕುರಿ ಮೇಯಿಸಲು ಹೋಗಿದ್ದ. ಈ ವೇಳೆ ಬಾಲಕ ಹೇಮಂತ್ ಕೃಷಿ ಹೊಂಡದಲ್ಲಿ ಕೈ, ಕಾಲು ತೊಳೆಯಲು ಹೋದಾಗ ಆಕಸ್ಮಿಕ ಕಾಲು ಜಾರಿ ಬಿದ್ದಿದ್ದಾನೆ. ಈ ವೇಳೆ ಮಗ ಮುಳುಗಿದ್ದನ್ನ ಕಂಡ ತಾಯಿ ಆತನ ರಕ್ಷಣೆಗೆ ಮುಂದಾಗಿದ್ದಾಳೆ. ಈ ವೇಳೆ ತಾಯಿಯೂ ಮಗನ ಜೊತೆ ನೀರಿನಲ್ಲಿ ಮುಳುಗಿದ್ದಾಳೆ. ಅಲ್ಲೇ ಇದ್ದ ಅಜ್ಜಿ ಸಹ ರಕ್ಷಣೆಗೆ ಮುಂದಾಗಿದ್ದು, ಆಕೆಯೂ ಇನ್ನೇನು ಮುಳುಗಿ ಹೋಗಬೇಕು ಅನ್ನವಷ್ಟರಲ್ಲಿ ಅಲ್ಲಿದ್ದ ಬಾಲಕಿಯೋರ್ವಳು ಆಕೆಗೆ ಡ್ರಿಪ್ ಪೈಪ್ ನೀಡಿ ಸಹಾಯ ಮಾಡಿದ್ದಾಳೆ.
ಘಟನೆಯಲ್ಲಿ ತಾಯಿ, ಮಗ ದಾರುಣ ಸಾವನ್ನಪ್ಪಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳನ್ನ ಹೊರತೆಗೆದಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಮೃತರ ಕಣ್ಣುಗಳನ್ನು ದಾನ ಮಾಡಿ ಸಾವನಲ್ಲೂ ಸಹ ಸಾರ್ಥಕತೆ ಮೆರೆದಿದ್ದಾರೆ.