ಕುಡಿದ ಮತ್ತಿನಲ್ಲಿ ವಿದೇಶಿ ಪ್ರಜೆ ಇಂಡಿಗೋ ಏರ್‌ಲೈನ್ಸ್ ಗಗನಸಖಿಗೆ ಕಿರುಕುಳ, ಸಹ ಪ್ರಯಾಣಿಕನ ಮೇಲೆ ಹಲ್ಲೆ
ಮುಂಬೈ: ಇಂಡಿಗೋ ಏರ್ಲೈನ್ಸ್ನಲ್ಲಿ (Indigo Airlines) ಮತ್ತೊಂದು ಅವ್ಯವಸ್ಥೆ ಪ್ರಕರಣ ಕಂಡುಬಂದಿದೆ, ಬ್ಯಾಂಕಾಕ್‌ನಿಂದ ಮುಂಬೈಗೆ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ 24 ವರ್ಷದ ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದ ಮೇಲೆ 62 ವರ್ಷ ವಯಸ್ಸಿನ ಸ್ವೀಡಿಷ್ ಪ್ರಜೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿಯನ್ನು ಕ್ಲಾಸ್ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್‌ಬರ್ಗ್ ಎಂದು ಗುರುತಿಸಲಾಗಿದೆ. ಈ ವಿಚಾರವಾಗಿ ಪ್ರಶ್ನಿಸಿದಕ್ಕೆ ಸಹ-ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾನೆ. 6E-1052 ಇಂಡಿಗೋ ಫ್ಲೈಟ್‌ನಲ್ಲಿ ಪ್ರಯಾಣದ ನಡುವೆ ಗದ್ದಲವನ್ನು ಸೃಷ್ಟಿಸಿದ್ದಾನೆ ಎಂದು ವರದಿಯಾಗಿದೆ.
ಅವ್ಯವಸ್ಥೆಗೆ ಕಾರಣವೇನು?
ವಿಮಾನದಲ್ಲಿ ಆಹಾರವಿಲ್ಲ ಎಂದು ಫ್ಲೈಟ್ ಅಟೆಂಡೆಂಟ್ ತಿಳಿಸಿದ್ದಾರೆ, ಇದರಿಂದ ಕೋಪಗೊಂಡು ಪ್ರಯಾಣಿಕರು ಅಶಿಸ್ತಿನ ವರ್ತನೆಯನ್ನು ಪ್ರಾರಂಭಿಸಿದರು ಎಂದು ವರದಿಯಾಗಿದೆ. ನಂತರ ಈ ಪ್ರಯಾಣಿಕ ಚಿಕನ್ ಡಿಶ್ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ. ಆಹಾರ ನೀಡಲು ಒಂದಿಷ್ಟು ಹಣವನ್ನು ಮೊದಲೇ ಪಾವತಿಸಬೇಕಿತ್ತು ಅದಕ್ಕಾಗಿ ಗಗನಸಖಿ ಪಿಒಎಸ್ ಯಂತ್ರವನ್ನು ಪ್ರಯಾಣಿಕನ ಬಳಿಗೆ ತಂದಿದ್ದಾರೆ. ಈ ಸಮಯದಲ್ಲಿ ಪ್ರಯಾಣಿಕ ಕ್ಲಾಸ್ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್‌ಬರ್ಗ್ ಕಾರ್ಡ್ ಸ್ವೈಪ್ ಮಾಡುವ ನೆಪದಲ್ಲಿ ಗಗನಸಖಿಯ ಕೈ-ಮೈಯನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಹೇಳಲಾಗಿದೆ.
ಈ ಬಗ್ಗೆ ಗಗನಸಖಿ ಪ್ರಯಾಣಿಕ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್‌ಬರ್ಗ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ವೆಸ್ಟ್‌ಬರ್ಗ್ ಸೀಟಿನಿಂದ ಎದ್ದುನಿಂತು ಇತರ ಪ್ರಯಾಣಿಕರ ಮುಂದೆ ಇಂಡಿಗೋ ಸಿಬ್ಬಂದಿಗೆ ಕಿರುಕುಳ ನೀಡಿದ್ದಾನೆ ಎಂದು ಮಹಿಳೆಯೊಬ್ಬರು ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಇದಕ್ಕೆ ಸಂಬಂಧಿಸಿದಂತೆ ಪ್ರಯಾಣಿಕ ವೆಸ್ಟ್‌ಬರ್ಗ್ ಮೇಲೆ ವಿಮಾನ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ಆತನ ಮೇಲೆ ಕೂಗಾಡಿದ್ದಾರೆ ಎಂದು ಗಗನಸಖಿ ಹೇಳಿದ್ದಾರೆ.
ಗುರುವಾರ ಇಂಡಿಗೋ ಏರ್‌ಲೈನ್ಸ್ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ವೆಸ್ಟ್‌ಬರ್ಗ್ ಬಂಧಿಸಲಾಗಿದೆ. ಅವರನ್ನು ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನು ನೀಡಲಾಗಿದೆ. ಇದು ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ನಡೆದ ಎಂಟನೇ ಅಶಿಸ್ತಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದೆ. 2017 ಮತ್ತು 2023ರ ನಡುವೆ ದಾಖಲಾದ ಐದನೇ ಕಿರುಕುಳದ ಘಟನೆಯಾಗಿದೆ. ಈ ಹಿಂದೆ ಇಂಡಿಗೋ ಗುವಾಹಟಿ-ದೆಹಲಿ ವಿಮಾನದಲ್ಲಿ ಕುಡಿದ ವ್ಯಕ್ತಿಯೊಬ್ಬ ಸೀಟಿನ ಮೇಲೆ ವಾಂತಿ ಮಾಡಿದ್ದಾನೆ ಮತ್ತು ಶೌಚಾಲಯದ ಸುತ್ತಲೂ ಮಲವಿಸರ್ಜನೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆಯನ್ನು ಭಾಸ್ಕರ್ ದೇವ್ ಕೊನ್ವಾರ್ ಅವರು ಟ್ವೀಟ್ ಮಾಡಿದ್ದಾರೆ.