ಕಿ.ಮೀ ಗಟ್ಟಲೆ ವೃದ್ಧನ ಎಳೆದೊಯ್ದ ಸ್ಕೂಟರ್ ಸವಾರ- ಆರೋಪಿ ಸಾಹಿಲ್ ಬಂಧನ
ಬೆಂಗಳೂರು: ಒನ್ ವೇ ನಲ್ಲಿ ಬಂದು ನಿಂತಿದ್ದ ಬೊಲೆರೋಗೆ ಢಿಕ್ಕಿ ಹೊಡೆದ ದ್ವಿಚಕ್ರವಾಹನ ಸವಾರ ಅದನ್ನು ಪ್ರಶ್ನಿಸಿದ ವೃದ್ಧ ಚಾಲಕನನ್ನು ಕಿಮೀ ಗಟ್ಟಲೆ ಮೃಗೀಯವಾಗಿ ಎಳೆದೊಯ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಈ ಕೃತ್ಯ ನಡೆದಿದ್ದು, ಕುವೆಂಪು ಭಾಷಾಭಾರತಿ ಪ್ರಾಧಿಕಾರಗೆ ತೆರಳುತ್ತಿದ್ದ ಬೊಲೆರೋ ಚಾಲಕ 71 ವರ್ಷದ ಮುತ್ತಪ್ಪ ಅವರ ಕಾರಿಗೆ ಹೋಂಡಾ ಆಕ್ಟೀವಾದಲ್ಲಿ ಬಂದ ದ್ವಿಚಕ್ರ ಸವಾರ ಸೊಹೇಲ್ ಎಂಬಾತ ಗುದ್ದಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ದ್ವಿಚಕ್ರ ವಾಹನ ಚಾಲಕ ಸೊಹೇಲ್ ಬೈಕ್ ನಿಂದ ಪರಾರಿಯಾಗಲು ಯತ್ನಿಸಿದ್ದು ವೇಳೆ ಮುತ್ತಪ್ಪ ಅವರು ಆತನ ಗಾಡಿ ಹಿಡಿದುಕೊಂಡಿದ್ದಾರೆ. ಅದನ್ನು ನೋಡಿಯೂ ಕೂಡ ಆತ ಏಕಾಏಕಿ ಗಾಡಿ ಚಲಾಯಿಸಿಕೊಂಡು ಹೋಗಿದ್ದಾನೆ.
ಬೈಕ್ ಓಡಿಸುತ್ತಿದ್ದಂತೆಯೇ ಮುತ್ತಪ್ಪ ಅವರು ಕೆಳಗೆ ಬಿದ್ದಿದ್ದು, ಆದರೂ ಬೈಕ್ ಬಿಟ್ಟಿಲ್ಲ. ಅದಾಗ್ಯೂ ಆತ ಬೈಕ್ ಚಲಾಯಿಸಿಕೊಂಡು ಹೋಗಿದ್ದಾನೆ. ಈ ದೃಶ್ಯ ಕಂಡ ದಾರಿಹೋಕರು ಅದನ್ನು ತಮ್ಮ ವಾಹನಗಳಲ್ಲಿದ್ದುಕೊಂಡೇ ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಬಳಿಕ ಆಟೋ ಚಾಲಕ, ಮತ್ತೋರ್ವ ಬೈಕ್ ಸವಾರ ಮತ್ತು ಕ್ಯಾಬ್ ಚಾಲಕರೊಬ್ಬರು ಆತನ ಬೈಕ್ ಅನ್ನು ಬಲವಂತವಾಗಿ ನಿಲ್ಲಿಸಿದ್ದಾರೆ. ಬಳಿಕ ಗುಂಪುಸೇರಿದ ಸ್ಥಳೀಯರು ಮೃಗೀಯ ವರ್ತನೆ ತೋರಿದ ಬೈಕ್ ಚಾಲಕನನ್ನು ಥಳಿಸಿದ್ದಾರೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮಾಗಡಿರಸ್ತೆ ಟ್ರಾಫಿಕ್ ಪೊಲೀಸರು ಜನರಿಂದ ಆರೋಪಿಯನ್ನು ರಕ್ಷಿಸಿದ್ದು ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂತೆಯೇ ಅಪಘಾತ ಮಾಡಿದ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಅಪಘಾತ ಮಾಡಿ, ವೃದ್ಧನನ್ನು ಎಳೆದೊಯ್ದ ಸ್ಕೂಟರ್ ಸವಾರ ಸೊಹೇಲ್ ವಿರುದ್ಧ ವಿಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮತ್ತು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಹಿಲ್ ನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.