ಬಿಜೆಪಿಯಿಂದ ವಿಧಾನಪರಿಷತ್ತಿಗೆ ಕಾರ್ಯಕರ್ತ ಅಭ್ಯರ್ಥಿ: ಪುತ್ತೂರಿನ ಕಿಶೋರ್ ಬೊಟ್ಯಾಡಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ.
ಮಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ದಕ್ಷಿಣ ಕನ್ನಡ ಉಡುಪಿ ಕ್ಷೇತ್ರದಿಂದ ಕಾರ್ಯಕರ್ತ ಅಭ್ಯರ್ಥಿಗೆ ಹೆಸರು ಘೋಷಣೆ ಮಾಡಿದ್ದು, ಪುತ್ತೂರಿನ ಬಿಜೆಪಿ ಕಾರ್ಯಕರ್ತ ಕಿಶೋರ್ ಬೊಟ್ಯಾಡಿ ಹೆಸರನ್ನು ಅಂತಿಮಗೊಳಿಸಿದೆ.
ವರ್ಷಗಳ ಹಿಂದೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಇವರನ್ನು ಈಗ ದಕ್ಷ ಕನ್ನಡ ಉಡುಪಿ ಜಿಲ್ಲೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಈ ಸ್ಥಾನಕ್ಕೆ ಬಿಜೆಪಿಯಲ್ಲಿ ಹಲವರು ಕಣ್ಣಿಟ್ಟಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದಕ್ಷಿಣ ಕನ್ನಡ ಬಿಜೆಪಿಯ ಸತೀಶ್ ಕುಂಪಲ ಮುಂತಾದವರು ಟಿಕೆಟ್ ಅಕಾಂಕ್ಷಿಗಳಾಗಿದ್ದರು ಆದರೆ ಇದೀಗ ಬಿಜೆಪಿಯು ಕಿಶೋರ್ ಕುಮಾರ್ ಬೊಟ್ಯಾಡಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಅ.3 ಕೊನೆಯ ದಿನಾಂಕವಾಗಿದ್ದು, ಅ.21ರಂದು ಮತದಾನ ನಡೆಯಲಿದೆ. ಅ.21ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅ.24ರಂದು ಮತ ಎಣಿಕೆ ನಡೆಯಲಿದೆ.
ಯುವಮೋರ್ಚಾ ಜಿಲ್ಲಾಧ್ಯಕ್ಷನಾಗಿ ಮಿಂಚಿದ ಪುತ್ತೂರಿನ ಬಿಜೆಪಿ ಕಾರ್ಯಕರ್ತ ಕಿಶೋರ್ ಬೊಟ್ಯಾಡಿ ಇವರು ಪರಿವಾರ ಸಂಘಟನೆಯಲ್ಲಿ ಮುಂಚೂಣಿಯ ನಾಯಕನಾಗಿ ಸೇವೆ ಸಲ್ಲಿಸಿದ್ದಾರೆ.
ಅತೀ ಕಡಿಮೆ ಜನಸಂಖ್ಯೆ ಇರುವ ಭಂಡಾರಿ ಸಮುದಾಯವನ್ನು ಗುರುತಿಸಿ ಈ ಬಾರಿ ಬಿಜೆಪಿ ಟಿಕೆಟ್ ನೀಡುವ ಮೂಲಕ ಕೆಲ ಸಮುದಾಯಕ್ಕೆ ಮನ್ನಣೆ ನೀಡಿರುವ ಬಿಜೆಪಿ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಪ್ರಸ್ತುತ ದಿನಗಳಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಯ ಆಯ್ಕೆಯ ಸಂದರ್ಭದಲ್ಲಿ ಜಾತಿಗಳನ್ನು ನೋಡಿಕೊಂಡು ದೊಡ್ಡ ಸಮುದಾಯಗಳಿಗೆ ಮಣೆ ಹಾಕುತ್ತಿದೆಎಂಬ ಆರೋಪ ಕೇಳಿ ಬರುತ್ತಿತ್ತು.ಆದರೆ ಪ್ರಸ್ತುತ ಬಿಜೆಪಿ ಯ ಈ ಅಚ್ಚರಿ ಯ ಆಯ್ಕೆಯಿಂದ ಅಂತಹದೊಂದು ಆರೋಪಕ್ಕೆ ತಕ್ಕ ಉತ್ತರ ನೀಡಿದಂತಾಗಿದೆ. ಈ ಬಾರಿ ಎಂ.ಎಲ್.ಸಿ.ಚುನಾವಣೆಗೆ ಪ್ರಬಲ ಸಮುದಾಯಗಳಾದ ಬಂಟ ಸಮಾಜದ ನಳಿನ್ ಕುಮಾರ್ ಕಟೀಲು ಹಾಗೂ ಮೊಗವೀರ ಸಮಾಜದ ಪ್ರಮೋದ್ ಮದ್ವರಾಜ್ , ಬಿಲ್ಲವ ಸಮುದಾಯದ ಸತೀಶ್ ಸುವರ್ಣ ಹಾಗೂ ಗೀತಾಂಜಲಿ ಸುವರ್ಣ ಅವರ ಹೆಸರುಗಳು ಕೇಳಿ ಬಂದಿತ್ತು.
ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಟಿಪ್ಪರ್ ಢಿಕ್ಕಿ ಹೊಡೆದು ಸಾವು:
ಕುಂದಾಪುರ : ಕಾರೊಂದು ಬಲಕ್ಕೆ ತಿರುಗಿಸುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ. ಕುಂದಾಪುರದ ಕೋಟೇಶ್ವರದಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಾಲೇಜು ಮುಗಿಸಿ ಸ್ನೇಹಿತರೊಂದಿಗೆ ಫುಟ್ಪಾತಿನ ಇಂಟರ್ ಲಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಮೀಪ ಕೋಟೇಶ್ವರ ಹಾಲಾಡಿ ರಸ್ತೆಯ ಕಟ್ಕೇರಿ ಎಂಬಲ್ಲಿ ಇಂದು ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯನ್ನು ನಾಗೂರು ನಿವಾಸಿ ಪ್ರಸ್ತುತ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಧನುಷ್ ಎಂದು ಗುರುತಿಸಲಾಗಿದೆ.
ಧನುಷ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಾಲೇಜು ಮುಗಿಸಿ ಕೋಟೇಶ್ವರದತ್ತ ರಸ್ತೆ ಬದಿಯ ಇಂಟರ್ ಲಾಕ್ ಮೇಲೆ ನಡೆದುಕೊಂಡು ಬರುತ್ತಿದ್ದ. ಅತೀ ವೇಗವಾಗಿ ಹಿಂದಿನಿಂದ ಬಂದ ಶ್ರೀ ಮಹಾಗಣಪತಿ ಪ್ರಸನ್ನ ಎಂಬ ಹೆಸರಿನ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ತೀರಾ ಬಲಬದಿಗೆ ಬಂದು ಧನುಷ್ ನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಧನುಷ್ ಲಾರಿಯಡಿಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಈಶ್ವರ ಮಲ್ಪೆ ಕುಟುಂಬಕ್ಕೆ ಚೆಕ್ ಹಸ್ತಾಂತರ:
ಉಡುಪಿ: ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ, ಹಲವು ಕ್ಲಿಷ್ಟಕರ ಸಂದರ್ಭದಲ್ಲಿ ಜಲ ಅವಘಡದಲ್ಲಿ ಮೃತಪಟ್ಟ ಮೃತದೇಹಗಳನ್ನು ನೀರಿನಿಂದ ಮೇಲೆತ್ತಿದ ಅಪಧ್ಬಾಂದವ, ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ರೂ.1 ಲಕ್ಷದ ಚೆಕ್ ನ್ನು ಅರುಣ್ ಕುಮಾರ್ ಪುತ್ತಿಲ ಈಶ್ವರ್ ಮಲ್ಪೆ ಮತ್ತು ಗೀತಾ ದಂಪತಿಗಳಿಗೆ ಅವರ ಮಲ್ಪೆಯ ಮನೆಯಲ್ಲಿ ವಿತರಿಸಿದರು.
ತನ್ನ ಮಕ್ಕಳು ವಿಶೇಷ ಚೇತನರಾಗಿ ತೀವ್ರ ಅನಾರೋಗ್ಯದಿಂದಿದ್ದರೂ ಮನೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿ ಜೀವದ ಹಂಗು ತೊರೆದು ಉಚಿತವಾಗಿ ರಕ್ಷಣೆಗೆ ಧಾವಿಸುವ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಯವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ಉತ್ತರ ಕನ್ನಡ ಜಿಲ್ಲೆಯ ಶೀರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಮನವಿಯ ಮೇರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್ ಲಾರಿಯನ್ನು ಗುರುತಿಸುವಲ್ಲಿಯೂ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕೊನೆಗೆ ಅವರನ್ನು ಅಧಿಕಾರಿಗಳು ಮತ್ತು ಸರ್ಕಾರ ಕಡೆಗಣನೆ ಮಾಡಿರುವುದು ಸಮಾಜದಲ್ಲಿ ತೀವ್ರ ಬೇಸರವನ್ನು ಉಂಟು ಮಾಡಿದೆ.
ಮನೆಯಲ್ಲಿ ಬಡತನವಿದ್ದರೂ ಮಾನವೀಯತೆಯಲ್ಲಿ ಅಗರ್ಭ ಶ್ರೀಮಂತರಾಗಿರುವ ಈಶ್ವರ್ ಮಲ್ಪೆಯವರ ಸೇವೆ ಇನ್ನಷ್ಟು ಬೇಕೆಂಬ ಹಂಬಲದಿಂದ ಪ್ರತಿಯೊಬ್ಬನೂ ಈಶ್ವರ್ ಮಲ್ಪೆಯವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಈಶ್ವರ್ ಮಲ್ಪೆಯವರಿಗೆ ಕೇವಲ ಶ್ಲಾಘನೆ ಸಾಕಾಗುವುದಿಲ್ಲ. ಸುಮಾರು 200 ರಷ್ಟು ಜೀವಗಳನ್ನು ನೀರಿನಿಂದ ಮೇಲೆತ್ತಿದ ಈ ಸಾಧಕನ ಹೆಸರಲ್ಲಿ ಸರ್ಕಾರ ‘ಅಪಧ್ಬಾಂದವ ಈಶ್ವರ್ ಮಲ್ಪೆ ತುರ್ತು ಸೇವಾ ಘಟಕ’ ಸ್ಥಾಪಿಸಿ ಅದರ ಮೂಲಕ ರಾಜ್ಯದೆಲ್ಲೆಡೆ ತರಬೇತಿ ಪಡೆದ ಒಂದು ತುರ್ತು ಸೇವಾ ತಂಡ ರಚನೆಯಾಗುವಂತೆ ಸರ್ಕಾರ ಇವರಿಗೆ ಸವಲತ್ತು ನೀಡಬೇಕು ಮತ್ತು ಈಶ್ವರ್ ಮಲ್ಪೆಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಡುವಂತೆ ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದರು.
ಕೇವಲ 7 ಗಂಟೆಯಲ್ಲಿ ಒಂದೇ ವಾಟ್ಸಾಪ್ ಗ್ರೂಪ್ ನಿಂದ ಸಂಗ್ರಹ : ಮಾಧ್ಯಮಗಳ ವರದಿಗಳನ್ನು ವೀಕ್ಷಿಸಿ ಈಶ್ವರ್ ಮಲ್ಪೆಯವರಿಗೆ ಕೈಲಾದ ಕೊಡುಗೆ ನೀಡಬೇಕೆಂದು ನಿರ್ಧರಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪ್ರಮುಖರು ‘ಪುತ್ತಿಲ ಬ್ರಿಗೇಡ್’ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ ಒಂದು ಸಂದೇಶಕ್ಕೆ ಕೇವಲ 7 ಗಂಟೆಯಲ್ಲಿ ಒಂದು ಲಕ್ಷ ರೂಪಾಯಿ ಸಂಗ್ರಹವಾಗಿದೆ. ಇದು ಈಶ್ವರ್ ಮಲ್ಪೆಯ ಮೇಲೆ ಜನರಿಗಿರುವ ಅಭಿಮಾನವನ್ನು ತೋರಿಸುತ್ತದೆ ಎಂದು ಸೇವಾ ಟ್ರಸ್ಟ್ ನ ಪ್ರಮುಖರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕರಾದ ಮಂಜು ಕೊಳ ಮಲ್ಪೆ,ಉಡುಪಿ ಹಿಂದೂ ಯುವಸೇನೆ ನಗರ ಅಧ್ಯಕ್ಷರಾದ ಸುನೀಲ್ ನೇಜಾರು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಂದಾರು, ಯುವ ಮೋರ್ಚಾ ಉಪಾಧ್ಯಕ್ಷ ಧನುಶ್ ಮೊದಲಾದವರು ಉಪಸ್ಥಿತರಿದ್ದರು.