ಕಾಲೇಜು ಕ್ಯಾಂಪಸ್ಸಲ್ಲೇ ಗೆಳತಿಗೆ ಗುಂಡಿಕ್ಕಿ, ಸಾವಿಗೆ ಶರಣಾದ ವಿದ್ಯಾರ್ಥಿ
ನವದೆಹಲಿ: ಗೆಳತಿಯೊಂದಿಗೆ ಜಗಳವಾಡಿದ ಬಳಿಕ ವಿದ್ಯಾರ್ಥಿಯೊಬ್ಬ ಆಕೆಯನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ನೊಯ್ಡಾದ ಶಿವ ನಾಡಾರ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ. ಕೊಲೆ ಘಟನೆ ವಿವಿಯ ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದೆ. ಇಬ್ಬರೂ 3ನೇ ವರ್ಷದ ಬಿಎ ಸಮಾಜಶಾಸ್ತ್ರ ವಿದ್ಯಾರ್ಥಿಗಳಾಗಿದ್ದು ಆರೋಪಿ ಅನುಜ್ (21) ಹಾಗೂ ಆತನ ಕ್ಲಾಸ್‌ಮೇಟ್ ಸ್ನೇಹಾ ಚೌರಾಸಿಯಾ ಉತ್ತಮ ಸ್ನೇಹಿತರಾಗಿದ್ದರು.
ಇವರು ಆಗಾಗ ಜಗಳವಾಡುತ್ತಿದ್ದರು ಎನ್ನಲಾಗಿದೆ. ಸದ್ಯ ವಿವಿಯಲ್ಲಿ ಬೇಸಿಗೆ ರಜೆ ಇದ್ದು ವಸತಿ ನಿಲಯಗಳಲ್ಲಿರುವ ಇಬ್ಬರು ಗುರುವಾರ ಮಧ್ಯಾಹ್ನ 1 ಗಂಟೆಗೆ ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರು ತಬ್ಬಿಕೊಂಡು ಮಾತನಾಡುತ್ತಿದ್ದಾಗ ಅನುಜ್ ನೀಡಿದ ಯಾವುದೋ ಉಡುಗೊರೆಯುನ್ನು ಸ್ನೇಹಾ ನಿರಾಕರಿಸಿದ್ದಾಳೆ. ಬಳಿಕ ಆಕೆಯ ಹೊಟ್ಟೆಗೆ ಅನುಜ್ ಗುಂಡು ಹಾರಿಸಿದ್ದು ಆಕೆ ನೆಲಕ್ಕುರುಳಿದ್ದಾಳೆ. ಬಳಿಕ ಪುರುಷರ ವಸತಿ ನಿಲಯದ ಕೋಣೆಗೆ ಹೋಗಿ ಅನುಜ್ ತಾನೂ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಕ್ಷಿಣೆ ಕಿರಕುಳ, ಮಹಿಳಾ ಟೆಕಿ ಆತ್ಮಹತ್ಯೆ:
ಬೆಂಗಳೂರು(ಮೇ.20): ವರದಕ್ಷಿಣೆ ಕಿರಕುಳ ತಾಳಲಾರದೆ ಮಹಿಳಾ ಟೆಕ್ಕಿಯೊಬ್ಬರು ಮರಣಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಪಾಪುರದ ನಿವಾಸಿ ಪಲ್ಲವಿ (24) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಬುಧವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಸುದರ್ಶನ್ ರೆಡ್ಡಿ ಹಾಗೂ ಆತನ ತಾಯಿ ವರದಕ್ಷಿಣೆ ಕಿರಕುಳ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಪಲ್ಲವಿ ಹಾಗೂ ಸುದರ್ಶನ್ ರೆಡ್ಡಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಹೆಬ್ಬಾಳ ಕೆಂಪಾಪುರದ ಆಪಾರ್ಟ್‌ಮೆಂಟ್‌ವೊಂದರಲ್ಲಿ ದಂಪತಿ ನೆಲೆಸಿದ್ದರು. ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುದರ್ಶನ್ ರೆಡ್ಡಿ ಮತ್ತು ಆತನ ತಾಯಿ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪಲ್ಲವಿಗೆ ಕಾಟ ನೀಡುತ್ತಿದ್ದರು. ಪ್ರತಿ ತಿಂಗಳ ಸಂಬಳವನ್ನು ನಮಗೆ ಕೊಡಬೇಕು ಎಂದು ಕಿರಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.