ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಕಿ.ಮೀ. ದೂರ ಹೊತ್ತೊಯ್ದ ಮಹಿಳೆ, ಐವರು ಅರೆಸ್ಟ್.., ವಿಡಿಯೋ ವೈರಲ್
ಬೆಂಗಳೂರು: ವೃದ್ಧನನ್ನು ರಸ್ತೆಯಲ್ಲಿ ಎಳೆದೊಯ್ದಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವೇಳೆ ಕಾರು ತಡೆಯಲು ಯತ್ನಿಸಿ ಬಾನೆಟ್ ಮೇಲೆ ಬಿದ್ದ ವ್ಯಕ್ತಿಯನ್ನು ಕಾರಿನ ಚಾಲಕಿ ಎಳೆದೊಯ್ದಿದ್ದಾರೆ.
ಬೆಂಗಳೂರಿನ ಉಲ್ಲಾಳದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಅಪಘಾತ ಪ್ರಕರಣದಲ್ಲಿ ನಡೆದ ಗಲಾಟೆ ವೇಳೆ ಅಲ್ಲಿಂದ ತೆರಳುತ್ತಿದ್ದ ಕಾರನ್ನು ತಡೆಯಲು ಹೋದ ವ್ಯಕ್ತಿ ಕಾರಿನ ಬಾನೆಟ್ ಹಿಡಿದಿದ್ದಾನೆ. ಈ ವೇಳೆ ಕಾರು ಚಲಾಯಿಸುತ್ತಿದ್ದ ಚಾಲಕಿ ಆತನ ಸಹಿತ ಸುಮಾರು 2ಕಿಮೀ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಈ ಕುರಿತ ವಿಡಿಯೋವನ್ನು ಸ್ಥಳೀಯರ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ ನಡೆದಿರುವ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಏನಿದು ಘಟನೆ?
ಉಲ್ಲಾಳ ಉಪನಗರ ರಸ್ತೆಯಲ್ಲಿ ಎಂವಿ ಲೇಔಟ್ ನಿವಾಸಿಗಳಾದ ಪ್ರಿಯಾಂಕಾ ಮತ್ತು ಆಕೆಯ ಪತಿ ಟಾಟಾ ನೆಕ್ಸಾನ್ ಕಾರಿನಲ್ಲಿ ವೈದ್ಯಕೀಯ ತಪಾಸಣೆಗಾಗಿ ಹೋಗುತ್ತಿದ್ದರು. ಈ ವೇಳೆ ಒನ್ ವೇ ನಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದ ದರ್ಶನ್ ಅವರ ಕಾರಿಗೂ ನೆಕ್ಸಾನ್ ಕಾರಿನ ನಡುವೆ ಢಿಕ್ಕಿಯಾಗಿದೆ. ಈ ವೇಳೆ ದರ್ಶನ್ ಮತ್ತು ಪ್ರಿಯಾಂಕಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಪ್ರಿಯಾಂಕಾ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ಗಲಾಟೆ ಸಂದರ್ಭದಲ್ಲೇ ದರ್ಶನ್ ಮತ್ತು ಸ್ನೇಹಿತರ ತಂಡ ಸ್ಥಳದಲ್ಲಿ ಸೇರುತ್ತಲೇ ಗಿಲಿಬಿಲಿಗೊಂಡ ಪ್ರಿಯಾಂಕಾ ಕಾರನ್ನು ಹತ್ತಿ ಹೋಗಲು ಯತ್ನಿಸಿದ್ದಾರೆ. ಈ ವೇಳೆ ದರ್ಶನ್ ಪ್ರಿಯಾಂಕಾ ಅವರ ನೆಕ್ಸಾನ್ ಕಾರಿನ ಬಾನೆಟ್ ಹಿಡಿದುಕೊಂಡಿದ್ದಾರೆ. ಆದಾಗ್ಯೂ ಪ್ರಿಯಾಂಕಾ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ.
ಪ್ರಿಯಾಂಕಾ ಕಾರು ಚಲಾಯಿಸಿಕೊಂಡು 1 ಕಿ.ಮೀ.ವರೆಗೂ ಹೋಗಿದ್ದು, ಕೆಲ ಯುವಕರು, ದ್ವಿಚಕ್ರ ವಾಹನಗಳಲ್ಲಿ ಕಾರು ಬೆನ್ನಟ್ಟಿದ್ದರು. ಮಾರ್ಗಮಧ್ಯೆಯೇ ಕಾರು ನಿಲ್ಲಿಸಿದ್ದಾರೆ. ಪ್ರಿಯಾಂಕಾ ಕಾರನ್ನು ಅಡ್ಡಗಟ್ಟಿ ಕಾರು ನಿಲ್ಲಿಸಿದ್ದಾರೆ. ಅಲ್ಲದೆ ಕಾರಿನ ಮೇಲೆ ಕಲ್ಲುಗಳ ಮೂಲಕ ದಾಳಿ ಮಾಡಿದ್ದು ಕಾರಿನ ಎಲ್ಲ ಗ್ಲಾಸ್ ಗಳು ಪುಡಿಪುಡಿಯಾಗಿವೆ.
ಉಭಯ ಗ್ಯಾಂಗ್ ವಶಕ್ಕೆ
ಪ್ರಸ್ತುತ ಎರಡೂ ಕಾರುಗಳನ್ನು ಜ್ಞಾನಭಾರತಿ ಪೊಲೀಸರು ಜಪ್ತಿ ಮಾಡಿದ್ದು, ದರ್ಶನ್ ಮತ್ತು ಗ್ಯಾಂಗ್ ಮತ್ತು ಪ್ರಿಯಾಂಕಾ ಮತ್ತು ಆಕೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಪಘಾತದ ನಂತರ ಮತ್ತೊಂದು ಕಾರಿನ ಚಾಲಕ ದರ್ಶನ್ ಅವರನ್ನು ಕಾರಿನ ಬಾನೆಟ್ ಮೇಲೆ ಹೊತ್ತೊಯ್ದಿದ್ದಕ್ಕಾಗಿ ಚಾಲಕಿ ಪ್ರಿಯಾಂಕಾ ವಿರುದ್ಧ ಯು/ಎಸ್ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇತರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ದರ್ಶನ್, ಯಶವಂತ್, ಸುಜನ್ ಮತ್ತು ವಿನಯ್ ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಎಫ್ ಆರ್ ದಾಖಲಾಗಿದೆ.
#Today @ Bangalore.. pic.twitter.com/fLDKbjAEFj
— Sowmyashree (@newsowmya) January 20, 2023