ಕಾಂಗ್ರೆಸ್-ಬಿಜೆಪಿ ಆಪರೇಷನ್ ಬಿರುಗಾಳಿ ; ಬಿಜೆಪಿಯಿಂದ ಕಾಂಗ್ರೆಸ್ ಗೆ ಬರಲಿದ್ದಾರೆಯೇ ಪ್ರಭಾವಿ ಶಾಸಕರು?
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮತ್ತೆ ಶಾಸಕರ ಆಪರೇಷನ್ ವಿಚಾರ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಕಳೆದ ಐದು ವರ್ಷಗಳ ಹಿಂದೆ ಆಪರೇಷನ್ ಕಮಲ ರಾಜ್ಯದಲ್ಲಿ ಭಾರಿ ರಾಜಕೀಯ ಸಂಚಲನ ಸೃಷ್ಟಿಸಿತ್ತು. ರಾಜ್ಯದಲ್ಲಿ ಭರ್ಜರಿ ಅಸೆಂಬ್ಲಿ ಗೆಲುವಿನ ಉತ್ಸಾಹದಲ್ಲಿರುವ ಕಾಂಗ್ರೆಸ್, ಮುಂಬರುವ ಬಿಬಿಎಂಪಿ ಹಾಗೂ ಲೋಕಸಭಾ ಚುನಾವಣೆಯಲ್ಲೂ ಗೆಲುವಿನ ಓಟ ಮುಂದುವರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಆರಂಭಿಸಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಮೂವರು ವರ್ಚಸ್ವಿ ಶಾಸಕರನ್ನು ಸೆಳೆಯಲು ಗಂಭೀರ ಪ್ರಯತ್ನ ನಡೆಸಿದೆ.
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮತ್ತೆ ಆಪರೇಷನ್ ಬಿರುಗಾಳಿ ಎದ್ದಿದೆ. ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಗೆದ್ದು ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆಗೆ ಸಿದ್ಧವಾಗುತ್ತಿದೆ. ಲೋಕಸಭೆ ಗೆಲುವಿನ ತಂತ್ರದ ಭಾಗವಾಗೇ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರ್ಜರಿ ಪ್ಲ್ಯಾನ್ ರೂಪಿಸಿದ್ದು, ಖುದ್ದು ಡಿಕೆ ಶಿವಕುಮಾರ್ ಆಪರೇಷನ್ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್ ಆಪರೇಷನ್ಗೆ ಇಂಬುಕೊಡುವಂತೆ ಡಿಕೆ ಸಹೋದರ ಡಿ.ಕೆ.ಸುರೇಶ್ ಸಹ, ಯಾರೇ ಬಂದರೂ ಪಕ್ಷಕ್ಕೆ ಸ್ವಾಗತ ಎಂದಿದ್ದಾರೆ
ಮುಖ್ಯವಾಗಿ ಅಧಿಕಾರದ ಬೆನ್ನೇರಿ ಬಿಜೆಪಿಗೆ ಹಾರಿ ಬಂದಿದ್ದ ಬಾಂಬೆ ಟೀಂನ 17 ಶಾಸಕರು ಇದೀಗ ಮತ್ತೆ ಅದೇ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ.ವಿ.ಸೋಮಣ್ಣ ಕಾಂಗ್ರೆಸ್ಗೆ ಹೋಗುತ್ತಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈಗಾಗಲೇ ಬಿಜೆಪಿಯಲ್ಲಿ ವಿ.ಸೋಮಣ್ಣ ರಾಜ್ಯಾಧ್ಯಕ್ಷ ಮತ್ತು ಲೋಕಸಭೆ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಆ ಸ್ಥಾನ ಮಾನ ನೀಡದೇ ಹೋದ್ರೆ ಅದನ್ನೇ ಕಾರಣವಾಗಿ ಮುಂದಿಟ್ಟು, ಬಿಜೆಪಿ ಬಿಡುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ. ಸೋಮಣ್ಣ ಕಾಂಗ್ರೆಸ್ಗೆ ಬಂದ್ರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನೆರವು ಆಗುತ್ತೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.
ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಾರೆಂಬ ವಿಚಾರ ಪ್ರಸ್ತಾಪಿಸಿದ ಶಾಸಕ ಮುನಿರತ್ನ ಅವರು ನಾನಂತೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. 17 ಜನರಲ್ಲಿ ಯಾರು ಕಾಂಗ್ರೆಸ್ಗೆ ಹೋಗುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಅಗತ್ಯ ಬಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಹೋಗುವುದಿಲ್ಲ. ಇದು ನನ್ನ ಸ್ಪಷ್ಟ ಉತ್ತರ ಎಂದು ಮುನಿರತ್ನ ಹೇಳಿದರು.
ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್, ಮಹಾಲಕ್ಷ್ಮಿ ಲೇಔಟ್‌ನ ಕೆ.ಗೋಪಾಲಯ್ಯ ಹಾಗೂ ಯಲ್ಲಾಪುರದ ಶಿವರಾಂ ಹೆಬ್ಬಾರ್ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ. ವೈಯಕ್ತಿಕ ವರ್ಚಸ್ಸಿನ ಜತೆಗೆ ತಮ್ಮದೇ ಮತ ಬ್ಯಾಂಕ್ ಸೃಷ್ಟಿಸಿಕೊಂಡಿರುವವರು ಹಾಗೂ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ಸಾಮರ್ಥ್ಯವುಳ್ಳವರನ್ನೇ ಗುರಿಯಾಗಿಸಿಕೊಂಡು ಸೆಳೆಯುವ ಕಸರತ್ತು ಶುರುವಾಗಿದೆ.
ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ. ಅನುಕೂಲ ಸಿಂಧು ರಾಜಕಾರಣ ಅನಿವಾರ್ಯ. ದ್ವೇಷ ಸಾಧನೆಯಿಂದ ಏನೂ ಸಾಧ್ಯವಿಲ್ಲ. ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚು ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೆಲವರ ಪಕ್ಷ ಸೇರ್ಪಡೆ ವಿಚಾರದಲ್ಲಿ ಈಗಾಗಲೇ ಪಕ್ಷದ ಸ್ಥಳೀಯ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್, ಹೇಳಿದ್ದಾರೆ.
ವರ್ಷಾಂತ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿಯುವ ಗುರಿ ಸಾಧನೆಯ ಉದ್ದೇಶವೂ ಇದೆ. ಇನ್ನೊಂದೆಡೆ, ಸ್ಪಷ್ಟ ಬಹುಮತವಿದ್ದೂ ಸರಕಾರದ ಆಯಸ್ಸಿನ ಕುರಿತು ಆಗಾಗ್ಗೆ ಕೇಳಿಬರುತ್ತಿರುವ ವದಂತಿಗಳಿಗೆ ‘ಬ್ರೇಕ್’ ಹಾಕುವ ಆಲೋಚನೆಯೂ ಇದ್ದಂತಿದೆ. ಮುಖ್ಯವಾಗಿ, ‘ಲೋಕ ಸಮರ’ದಲ್ಲೂ ಎದುರಾಳಿ ಬಿಜೆಪಿಗೆ ಏಟು ನೀಡಿ, ಕಾಂಗ್ರೆಸ್ ಪರ ಅಲೆ ಎಬ್ಬಿಸಲು ಕಾರ್ಯತಂತ್ರ ಅಡಗಿದಂತಿದೆ.