ಕಸದ ರಾಶಿ ಪಕ್ಕದಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ: ಮಗು ವಶಕ್ಕೆ ಪಡೆದ ಮಕ್ಕಳ ಕಲ್ಯಾಣ ಇಲಾಖೆ
ಮಂಡ್ಯ (ಫೆಬ್ರವರಿ 21, 2023): ಮನೆಯೊಂದರ ಸಮೀಪದ ತಿಪ್ಪೆ ಪಕ್ಕದಲ್ಲಿ ನವಜಾತ ಶಿಶುವನ್ನು ತಾಯಿ ಬಿಟ್ಟು ಹೋಗಿರುವ ಪ್ರಕರಣ ಮಂಡ್ಯ ಜಿಲ್ಲೆಯಲ್ಲಿ ವರದಿಯಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯೊಂದರ ಸಮೀಪದ ತಿಪ್ಪೆ ಪಕ್ಕದಲ್ಲಿ ಹೆಣ್ಣು ಮಗು ಕಂಡುಬಂದಿದ್ದು, ಮನೆ ಮುಂದೆ ಮಗುವಿನ ಅಳುವಿನ ಸದ್ದು ಕೇಳಿಸುತ್ತಿರುವ ಹಿನ್ನೆಲೆ ಹೊರಬಂದು ನೋಡಿದ ಮನೆ ಮಾಲೀಕರು ಮಗುವನ್ನು ಮೊದಲ ಬಾರಿ ಕಂಡುಕೊಂಡಿದ್ದಾರೆ.
ಮನೆ ಸಮೀಪದ ತಿಪ್ಪೆ ಬಳಿಯಿದ್ದ ಬ್ಯಾಗ್‌ನಲ್ಲಿ 6 ದಿನದ ಹೆಣ್ಣು ಶಿಶು ಪತ್ತೆಯಾಗಿದೆ. ಮನೆ ಬಳಿ ಅನುಮಾನಾಸ್ಪದ ಬ್ಯಾಗ್ ಹಾಗೂ ಮಗುವಿನ ಅಳುವಿನ ಶಬ್ದ ಕೇಳಿಬಂದ ಹಿನ್ನೆಲೆ ಆ ಬ್ಯಾಗ್ ಅನ್ನು ಭಾಗ್ಯಮ್ಮ ಹಾಗೂ ವರದರಾಜು ದಂಪತಿ ಪರಿಶೀಲನೆ ಮಾಡಿದ ವೇಳೆ ಈ ಪ್ರಕರಣ ಬಯಲಾಗಿದೆ. ನಂತರ ಗ್ರಾಮಸ್ಥರು ಮಗುವಿನ ಹಾರೈಕೆ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ನವಜಾತ ಶಿಶುವಿಗೆ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಶಿಶುವಿನ ಆರೋಗ್ಯ ಉತ್ತಮವಾಗಿದೆ ಎಂದು ಕಂಡುಬಂದಿದೆ. ಮಗುವಿಗೆ ಚಿಕಿತ್ಸೆ ಕೊಡಿಸಿದ ಬಳಿಕ ಮಕ್ಕಳ ಕಲ್ಯಾಣ ಇಲಾಖೆ ಮಗುವನ್ನು ವಶಕ್ಕೆ ಪಡೆದಿದೆ. ಈ ಮಧ್ಯೆ, ಮಗುವಿನ ಪೋಷಕರು ಯಾರು, ಯಾವ ಕಾರಣಕ್ಕೆ ಮಗು ಬಿಟ್ಟು ಹೋಗಿದ್ದಾರೆ ಎಂದು ತನಿಖೆ ನಡೆಯಲಾಗುತ್ತಿದ್ದು, ಈ ಸಂಬಂಧ ಮಂಡ್ಯ ಜಿಲ್ಲೆ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.