ಕಳ್ಳಸಾಗಣೆಯಲ್ಲಿ ಕೇರಳ ನಂ.1 : ದೇಶದಲ್ಲಿ 2022ರಲ್ಲಿ 3500 ಕೆಜಿ ಚಿನ್ನ ಜಪ್ತಿ
ನವದೆಹಲಿ: 2022ರ ಅವಧಿಯಲ್ಲಿ ದೇಶದ ವಿವಿಧೆಡೆಗಳಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿದ್ದ ಒಟ್ಟು 3,502 ಕೆ.ಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಇದು 2021ರ ಪ್ರಮಾಣಕ್ಕಿಂತ ಶೇ.47ರಷ್ಟು ಹೆಚ್ಚು ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಈ ಕುರಿತು ಒಟ್ಟು 3,982 ಪ್ರಕರಣಗಳು ದಾಖಲಾಗಿದ್ದು ಕೇರಳವೊಂದರಲ್ಲೇ (Kerala) 755.81 ಕೆ.ಜಿ ಹಾಗೂ ಮಹಾರಾಷ್ಟ್ರದಲ್ಲಿ (Maharashtra) 535.65 ಕೆ.ಜಿ, ತಮಿಳುನಾಡಿನಲ್ಲಿ (Tamilnadu 519 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದು ಇವು ಅತಿ ಹೆಚ್ಚು ಚಿನ್ನ ವಶಪಡಿಸಿಕೊಳ್ಳಲಾದ ಮೊದಲ 3 ರಾಜ್ಯಗಳಾಗಿವೆ. 2020ರಲ್ಲಿ 2,154 ಕೆ.ಜಿ ಮತ್ತು 2021ರಲ್ಲಿ 2,383 ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿತ್ತು.
ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯಿಂದಲೇ ಚಿನ್ನ ಕಳ್ಳಸಾಗಣೆ
ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಏರ್ ಇಂಡಿಯಾ ಕ್ಯಾಬಿನ್ ಕ್ರೀವ್ ಓರ್ವನನ್ನು ಕೊಚ್ಚಿ ಏರ್‌ಪೋರ್ಟ್‌ನಲ್ಲಿ (Kochi Airport) ಕಸ್ಟಮ್ಸ್ ಅಧಿಕಾರಿಗಳು ಕೆಲ ದಿನಗಳ ಹಿಂದೆ ಬಂಧಿಸಿದ್ದರು. ವಯನಾಡ್ (Wayanad) ಮೂಲದ ಶಾಫಿ ಬಂಧಿತನಾದ ಏರ್ ಇಂಡಿಯಾದ ಸಿಬ್ಬಂದಿ, ಈತ ತನ್ನ ತೋಳುಗಳ ಕೈ ತೋಳುಗಳ ಮೇಲೆ ಚಿನ್ನವನ್ನು ಇಟ್ಟು ಅದಕ್ಕೆ ಗಮ್ ಟೇಪ್‌ನಿಂದ ಕವರ್ ಮಾಡಿದ್ದ ನಂತರ ಉದ್ದ ತೋಳಿನ ಶರ್ಟ್ ಧರಿಸಿದ್ದ. ಹೀಗೆ ಈತ ಕಳ್ಳ ಸಾಗಣೆ ಮಾಡಿ ತಂದ 1,487 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆತನನ್ನು ಬಂಧಿಸಿದ್ದಾರೆ.
ಬಹ್ರೇನ್ ನಿಂದ ಕೋಝಿಕೋಡ್-ಕೊಚ್ಚಿಗೆ ( Bahrain-Kozhikode-Kochi) ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಫಿ ಎಂಬಾತ ಕಳ್ಳಸಾಗಣೆ ಮೂಲಕ ಚಿನ್ನ ತರುತ್ತಿದ್ದಾನೆ ಎಂಬ ಗೌಪ್ಯ ಮಾಹಿತಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್‌ಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡಿದಾಗ ಚಿನ್ನ ಇರುವುದು ಪತ್ತೆಯಾಗಿದೆ.
ಆರೋಪಿ ಕೈಗಳಿಗೆ ಚಿನ್ನವನ್ನು ಸುತ್ತಿ ಗಮ್‌ಟೇಪ್‌ನಿಂದ ಅಡಗಿಸಿದ್ದ ನಂತರ ಫುಲ್ ಸ್ಲೀವ್‌ನ ಶರ್ಟ್ ಧರಿಸಿದ್ದ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು ಸಿಂಗಾಪುರದಿಂದ ಚೆನ್ನೈ ಏರ್‌ಪೋರ್ಟ್‌ಗೆ ಆಗಮಿಸಿದ ಇಬ್ಬರು ಪ್ರಯಾಣಿಕರು 3.3 ಕೋಟಿ ಮೊತ್ತದ 6.8 ಕೆಜಿ ತೂಕದ ಚಿನ್ನ ಕಳ್ಳಸಾಗಣೆ ಮಾಡಿ ಚೆನ್ನೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು.
ಇವರು ಸಿಂಗಾಪುರದಿಂದ ಚೆನ್ನೈಗೆ ಏರ್ ಇಂಡಿಯಾ AI-347 ಹಾಗೂ 6E-52 ವಿಮಾನದಲ್ಲಿ ಆಗಮಿಸಿದ್ದರು. ಈ ಬಗ್ಗೆ ಚೆನ್ನೈ ಕಸ್ಟಮ್ಸ್ ಟ್ವಿಟ್ ಮಾಡಿತ್ತು. ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ, ಸಿಂಗಾಪುರದಿಂದ AI-347 ಮತ್ತು 6E-52 ಮೂಲಕ ಬಂದ 2 ಪ್ರಯಾಣಿಕರನ್ನು 07.03.23 ರಂದು ಕಸ್ಟಮ್ಸ್ ತಡೆಹಿಡಿದಿದೆ. ಅವರ ಲಗೇಜ್ ಪರಿಶೀಲಿಸಿದಾಗ ಒಟ್ಟು 6.8 ಕೆಜಿ ತೂಕದ ಚಿನ್ನ 3.32 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದ್ದು, ಅದನ್ನು CA 1962 ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದೆ. ಅವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.