ಬೆಂಗಳೂರು : ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಯೋಜಿಸಿರುವ ಪಾದಯಾತ್ರೆ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ .ಡಿ.ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ಒಂದು ವಾರದಿಂದ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ಮಾಡುತ್ತಲೇ ಬಂದಿರುವ ಎಚ್ ಡಿಕೆ ಈಗ ಮತ್ತೆ ಸರಣಿ ಟ್ವೀಟ್ ಗಳ ಮೂಲಕ ಹರಿಹಾಯ್ದಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ್ದು, ಮೇಕೆದಾಟು ಪಾದಯಾತ್ರೆಗೆ ಕುಮಾರಸ್ವಾಮಿ ಯವರು ಭಾಗವಹಿಸಬಹುದು ಎಂದಿರೋ ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಡಿಕೆಶಿ, ನನ್ನನ್ನು ಸೇರಿಸಿ, 83 ತಾಲ್ಲೂಕುಗಳ ಜನರಿಗೆ ಮೇಕೆದಾಟು ಮಕ್ಮಲ್ ಟೋಪಿ ಹಾಕ್ತಿದ್ದಾರೆ. ಮೇಕೆದಾಟು ಮೂಲ ರೂವಾರಿ ದೇವೇಗೌಡರು. ಆದರೆ ಅವರನ್ನು ಮರೆತ ಕೈ ನಾಯಕರು, ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ. ನೆಲದ ಮಣ್ಣಿನ ಮಕ್ಕಳ ನಂಬಿಕೆಯನ್ನೇ ಕಾಂಗ್ರೆಸ್ ಬುಲ್ಡೋಜ್ ಮಾಡುತ್ತಿದೆ.
ಹಿಂದೆ ಪಿ ವಿ ನರಸಿಂಹರಾವ್ ಪ್ರಧಾನಿ ಆಗಿದ್ದಾಗ ತಮಿಳುನಾಡಿನ ಒತ್ತಡಕ್ಕೆ ಮಣಿದು, ಬೆಂಗಳೂರಿನ ನ್ಯಾಯಯುತ ನೀರನ್ನು ತಡೆದಿದ್ರು. ಕನ್ನಡಿಗರ ಕನಸುಗಳಿಗೆ ಕೊಳ್ಳಿ ಇಟ್ಟ ಅದೇ ಪಕ್ಷ ಈಗ ಸತ್ಯಗಳನ್ನು ಹೂತು ಮುಜುಗರ ವಿಲ್ಲದೇ ಮತಯಾತ್ರೆಗೆ ಹೊರಟಿದೆ ಎಂದು ಎಚ್ ಡಿಕೆ ಆರೋಪಿಸಿದ್ದಾರೆ. ಬೆಂಗಳೂರಿಗೆ ಕಾವೇರಿ ನೀರು ಕೊಟ್ಟವರು ದೇವೇಗೌಡರು ಎಂದಿರುವ ಕುಮಾರಸ್ವಾಮಿ, ಜೀವಜಲ ತಂದು ಬವಣೆ ನೀಗಿಸಿದವರು ಅವರೇ, ಈ ಭಗೀರಥನನ್ನೇ ಮರೆತ ಕಾಂಗ್ರೆಸ್ ಕೃತಘ್ನ ರಾಜಕಾರಣಕ್ಕೆ ಏನು ಹೇಳುವುದು..? ಹಿಂದೆ 5 ವರ್ಷ ಸಿದ್ದು ಹಸ್ತರೇ ಸಿಎಂ ಆಗಿದ್ದರು, ಅವಾಗ ಕೇಂದ್ರದ ಮುಂದೆ ಪ್ರತಾಪ ತೋರಬಹುದಿತ್ತು- ಬರೀ ಮಾತಿನ ಉತ್ತರ ಪೌರುಷ ಎಂದು ಟೀಕಿಸಿದ್ದಾರೆ.
ನಿಮ್ಮ ʼಬ್ರೂಟಸ್ʼ ಬುದ್ಧಿ, ಸರಕಾರವನ್ನೇ ಸ್ವಾಹ ಮಾಡಿದ ʼಸಿದ್ಧಕಲೆʼಯ ಬಗ್ಗೆ 2018ರಲ್ಲೇ ನನಗೆ ಅರಿವಾಯಿತು. ‘ಕೈ’ ಚಿಹ್ನೆ ಇಟ್ಟುಕೊಂಡು ಕಂಡೋರ ಮೇಲೆ ʼಕೈʼ ಇಡುವ ಭಸ್ಮಾಸುರ ರಾಜಕಾರಣದ ಅನುಭವ ನನಗೂ, ದೇವೇಗೌಡರಿಗೂ ಆಗಿದೆ. ಈ ಪಾದಯಾತ್ರೆ ಯಿಂದ ಜನರಿಗೇನು ಸಂದೇಶ ನೀಡುತ್ತಿದ್ದೀರಿ.
ರಾಜ್ಯದ ಹಿತದ ಪ್ರಶ್ನೆ ಬಂದಾಗ ಗೌಡರು ರಾಜಿಯಾದವರಲ್ಲ, ಅವರೊಬ್ಬರಿಂದಲೇ ಮೇಕೆದಾಟು ಯೋಜನೆ ಸಾಕಾರ ಸಾಧ್ಯ ಎಂದಿರುವ ಕುಮಾರಸ್ವಾಮಿ, ಇಲ್ಲಿ 30 ವರ್ಷ ಆಳಿದವರು ಕಾವೇರಿ- ಕೃಷ್ಣಗೆ ಕೊಟ್ಟ ಕೊಡುಗೆ ಏನು..? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಸ್ಲೋಗನ್ ಹೇಳಿಕೊಂಡು, ಉತ್ತರ ಕರ್ನಾಟಕಕ್ಕೆ ಟೋಪಿ ಹಾಕಿದ್ದಾಗಿದೆ.. ಈಗ ಮೇಕೆದಾಟು ವಿಚಾರದಲ್ಲಿಯೂ ಅದೇ ಆಗಲಿದೆ. ಮೇಕೆದಾಟು ಯೋಜನೆ ತಾಂತ್ರಿಕವಾಗಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾದ್ರೆ ಕೇಂದ್ರದ ಮೇಲೆ ಒತ್ತಡ ತಂದು, ಯೋಜನೆ ಗೆ ಒಪ್ಪಿಗೆ ಪಡೆಯಬೇಕು.ಅದು ಬಿಟ್ಟು ಹೊಸ ಸ್ಲೋಗನ್ ಅಗತ್ಯತ ಇಲ್ಲ ಎಂದು ಎಚ್ಡಿಕೆ ಹರಿಹಾಯ್ದಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಕೈಗೊಂಡಿರುವ ಹೋರಾಟ ಪಕ್ಷಾತೀತ. ಇದನ್ನು ಟೀಕೆ ಮಾಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷರು. ಅವರು ನನ್ನನ್ನೂ ಸೇರಿಸಿ 83 ತಾಲೂಕುಗಳ ಜನರಿಗೆ ʼಮೇಕೆದಾಟು ಮಕ್ಮಲ್ ಟೋಪಿʼ ಹಾಕಲು ಹೊರಟಿದ್ದಾರೆ.
ಪಾಪ ತೊಳೆಯುವ ತಾಯಿ ಲೋಕಪಾವನಿ ಈಗ ವೋಟಿನ ದಾಳವಾಗುತ್ತಿರುವುದು ನಾಡಿನ ದುರ್ದೈವ ಎಂದಿರುವ ಕುಮಾರಸ್ವಾಮಿ, ಭೂ ತಾಯಿ ಒಡಲಿನ ಮಣ್ಣು ಬಗೆದ, ಕಲ್ಲುಬಂಡೆಗಳನ್ನು ನುಂಗಿದ ರಕ್ಕಸ ರಾಜಕಾರಣದ ಕಾಕದೃಷ್ಠಿ ಈಗ ಮಲತಾಯಿ ಕಾವೇರಿ ಮೇಲೂ ಬಿದ್ದಿದೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಗೆ ಟಾಂಗ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಕೈನಾಯಕರ ಮೇಕೆದಾಟು ಪಾದಯಾತ್ರೆಗೆ ಜೆಡಿಎಸ್ ನಿಂದ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸರಣಿ ಟ್ವೀಟ್ ನಲ್ಲಿ ತಮ್ಮ ಆಕ್ರೋಶ ಹಂಚಿಕೊಂಡಿದ್ದಾರೆ.
ಹೌದು. ಜಾಣ ಮರೆವು ಕೂಡ ಒಂದು ರೋಗ. ಮಲತಾಯಿ ದೋರಣೆಯೇ ಮೈವೇತ್ತ ಕಾಂಗ್ರೆಸ್ ಈಗ ಪವಿತ್ರ ಗಂಗೆಯನ್ನೂ ಮತಕ್ಕೆ ಬಳಸುತ್ತಿದೆ. ಆಗ ಏನೂ ಮಾಡದ ʼಉತ್ತರಕುಮಾರ ಸಿದ್ದಸೂತ್ರಧಾರʼ, ಈಗೇನು ಮಾಡಲು ಸಾಧ್ಯ? ಆದರೆ; ರಾಜ್ಯದ ಹಿತದ ಪ್ರಶ್ನೆ ಬಂದಾಗ ಗೌಡರು ರಾಜಿಯಾದವರಲ್ಲ ಎಂದು ಹೇಳಿದ್ದಾರೆ.