ಕಲುಷಿತ ನೀರು ಸೇವಿಸಿ 8 ತಿಂಗಳ ಮಗು ಸೇರಿ ಐವರು ಸಾವು
ವಿಜಯನಗರ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಮಂಗಳವಾರ ತಡರಾತ್ರಿ ಇನ್ನೂ ಮೂವರು ಗ್ರಾಮಸ್ಥರು ದಾವಣಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎರಡು ವಾರಗಳಿಂದ ತಂಬಿಗೇರಿ ಗ್ರಾಮದಲ್ಲಿ ಕಲುಷಿತ ನೀರು ಸಮಸ್ಯೆ ಕಾಣಿಸಿಕೊಂಡಿತ್ತು. ನೀರು ಸರಬರಾಜು ಪೈಪ್‌ಗಳಲ್ಲಿ ಗ್ರಾಮದ ಮನೆಗಳಿಗೆ ಕಲುಷಿತ ನೀರು ಸೇರಿತ್ತು.
ಈ ನೀರು ಸೇವಿದ್ದರಿಂದ ಗ್ರಾಮದ ಹಲವರು ಆಸ್ಪತ್ರೆ ಸೇರುವಂತಾಯಿತು. ಸುಮಾರು 25 ಜನರನ್ನು ದಾವಣಗೆರೆ ಮತ್ತು ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಈ ಪೈಕಿ ಆವರು ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 17ರಂದು ಮೊದಲ ಸಾವು ವರದಿಯಾಗಿತ್ತು. 35 ವರ್ಷದ ಸುರೇಶ್ ಭೋವಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಂತರ ಅಕ್ಟೋಬರ್ 21ರಂದು ದಾವಣಗೆರೆಯ ಚಿಗಟೇರಿ ಸರ್ಕಾರಿ ಆಸ್ಪತ್ರೆಯಲ್ಲಿ 45 ಮಹಾಂತೇಶ ಭೋವಿ ಮೃತಪಟ್ಟರು. ಮಂಗಳವಾರ ತಡರಾತ್ರಿ ಇನ್ನೂ ಮೂವರು ಗ್ರಾಮಸ್ಥರಾದ ಗೌರಮ್ಮ (60), ಹನುಮಂತಪ್ಪ (38) ಮತ್ತು 8 ತಿಂಗಳ ಮಗು ಸಹ ಸಾವನ್ನಪ್ಪಿದೆ. ಈ ಸಾವುಗಳು ನೀರಿನ ಮಾಲಿನ್ಯದಿಂದ ಸಂಭವಿಸಿವೆ ಎಂದು ಲ್ಯಾಬ್ ವರದಿಗಳು ದೃಢಪಡಿಸಿವೆ.
ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಬುಧವಾರ ಗ್ರಾಮಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಸೋಮವಾರ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಕಲುಷಿತ ನೀರಿನ ಸಮಸ್ಯೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರಿಂದ ಪ್ರತಿಭಟನೆ ಎದುರಿಸಿದರು.
ಕಲುಷಿತ ನೀರು ಸೇವಿಸಿ ಇನ್ನೂ ನಾಲ್ವರು ಗ್ರಾಮಸ್ಥರು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕ್ಷಿಪ್ರವಾಗಿ ಕ್ರಮಕೈಗೊಳ್ಳಲು ವಿಫಲರಾಗಿದ್ದಾರೆ. ಈ ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ತಂಬಿಗೇರಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಳೆದ ವಾರದಲ್ಲಿ ಕರ್ನಾಟಕದಲ್ಲಿ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಮಂಗಳವಾರ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದಾರೆ.
ಮಳೆಗೆ ಮನೆಗೋಡೆ ಕುಸಿದು ಬಿದ್ದು ಮಹಿಳೆ ಸಾವು:
ತುಮಕೂರು: ನಿರಂತರ ಮಳೆಯಿಂದಾಗಿ (Rain) ಮನೆ ಗೋಡೆ (Wall) ಕುಸಿದು ಬಿದ್ದು ಮಣ್ಣಿನಡಿ ಸಿಲುಕಿ ಮಹಿಳೆಯೊಬ್ಬರು ಮೃತ ಪಟ್ಟ ದಾರುಣ ಘಟನೆ ತುಮಕೂರು (Tumakuru) ಜಿಲ್ಲೆ ಗುಬ್ಬಿ (Gubbi) ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿ. ಹೊಸಹಳ್ಳಿ ನಿವಾಸಿ ಸಹನಾ (27) ಮೃತ ದುರ್ದೈವಿ. ಬೆಳಗ್ಗೆ ಸ್ನಾನಕ್ಕೆ ಹಳೆಯ ಮನೆಗೆ ತೆರಳಿದ್ದ ವೇಳೆ ಗೋಡೆ ಕುಸಿದು ಸಹನಾ ಮಣ್ಣಿನಡಿ ಸಿಲುಕಿದ್ದರು. ಮಣ್ಣಿನಡಿ ಸಿಲುಕಿದ್ದ ಸಹನಾಳನ್ನ ಗ್ರಾಮಸ್ಥರು ರಕ್ಷಣೆ ಮಾಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಸಹನಾಳನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು ಕೇಸ್: 5 ಲಕ್ಷ ರೂ ಪರಿಹಾರ ಘೋಷಿಸಿದ ಡಿಕೆ ಶಿವಕುಮಾರ್:
ಬೆಂಗಳೂರು: ನಗರದಲ್ಲಿ ಕೆಂಗೇರಿ ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಬಿಬಿಎಂಪಿಯಿಂದ ಐದು ಲಕ್ಷ ರೂ. ಪರಿಹಾರವನ್ನು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಟಿವಿ9ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಪರಿಹಾರ ಘೋಷಣೆ ಮಾಡಲಾಗಿದೆ.
ಈ ವಿಚಾರವಾಗಿ ಮಾತನಾಡಿರುವ ಡಿಕೆ ಶಿವಕುಮಾರ್, ಮಕ್ಕಳು ಇಬ್ಬರು ಸಣ್ಣವರು ಹಾಗಾಗಿ ಬಿಬಿಎಂಪಿಯಿಂದ ಇಬ್ಬರು ಮಕ್ಕಳಿಗೆ ಐದು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಪರಿಹಾರ ನೀಡುವ ಸಂಬಂಧ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಜತೆ ಮಾತಾಡಿದ್ದೇನೆ. ಬೆಂಗಳೂರಿನ ಯಶವಂತಪುರ ಕ್ಷೇತ್ರ ವ್ಯಾಪ್ತಿಗೆ ಕೆಂಗೇರಿ ಸೇರುತ್ತದೆ ಎಂದಿದ್ದಾರೆ.
ನಾಗಮ್ಮ ಪುತ್ರಿ ಮಹಾಲಕ್ಷ್ಮೀ, ಪುತ್ರ ಜಾನ್ ಸೀನ ಮೃತಪಟ್ಟಿದ್ದರು. ನಿನ್ನೆ ಬೆಳಗ್ಗೆ ಆಕಸ್ಮಿಕವಾಗಿ ಕೆಂಗೇರಿ ಕೆರೆಗೆ ಬಿದ್ದಿದ್ದ ತಂಗಿ ಮಹಾಲಕ್ಷ್ಮೀ ರಕ್ಷಣೆಗಾಗಿ ಕೆರೆಗೆ ಇಳಿದಿದ್ದ ಅಣ್ಣ ಜಾನ್ ಸೀನ ಕೂಡ ಮೃತಪಟ್ಟಿದ್ದ. ನಿನ್ನೆ ಅಣ್ಣ ತಂಗಿಯ ಮೃತದೇಹಗಳು ಪತ್ತೆಯಾಗಿದ್ದವು. ಇದೀಗ ಮೃತ ಮಕ್ಕಳ ತಾಯಿ ನಾಗಮ್ಮಗೆ ಪರಿಹಾರ ಘೋಷಿಸಲಾಗಿದೆ.
ಮೃತ ಇಬ್ಬರು ಮಕ್ಕಳು ಮತ್ತು ತಾಯಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಹರ್ಷ ಲೇಔಟ್ನಲ್ಲಿ ವಾಸವಾಗಿದ್ದರು, ಕನಿಷ್ಠ ಸೌಜನಕ್ಕಾದರೂ ಶಾಸಕ ಎಸ್ ಟಿ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ಘೋಷಣೆ ಮಾಡಿರಲಿಲ್ಲ. ಇಬ್ಬರು ಮಕ್ಕಳ ಅಂತ್ಯ ಸಂಸ್ಕಾರಕ್ಕೂ ಹಣವಿಲ್ಲದೆ ಪಾಪ ಆ ತಾಯಿ ನಾಗಮ್ಮ ಗೋಳಾಡಿದ್ದಾರೆ.
ಮೃತರಾದ ಜಾನ್ ಸೀನಾ ಮತ್ತು ಮಹಾಲಕ್ಷ್ಮೀ ಮೃತದೇಹವನ್ನ ಮೈಸೂರು ರೋಡ್ನಲ್ಲಿರುವ ರಾಜರಾಜೇಶ್ವರೀ ಮೆಡಿಕಲ್ ಕಾಲೇಜಿನಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿದ್ದು, ನಂತರ ಕೆಂಗೇರಿ ಉಪನಗರದ ಬಿಬಿಎಂಪಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.