ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಬಿಜೆಪಿಯ ಡಬಲ್ ಎಂಜಿನ್ ಸರಕಾರ ಅಗತ್ಯ- ಮೋದಿ
ಬೀದರ್: ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಬಿಜೆಪಿಯ ಡಬಲ್ ಎಂಜಿನ್ ಸರಕಾರ ಅಗತ್ಯ ಮತ್ತು ಅನಿವಾರ್ಯವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೆ ಕರ್ನಾಟಕ ದೇಶದ ನಂಬರ್ ಒನ್ ರಾಜ್ಯ ಆಗಲು ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹುಮನಾಬಾದ್ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ಶನಿವಾರ ಆಯೋಜಿಸಿದ್ದ ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಬಲ್ ಎಂಜಿನ್ ಆಡಳಿತದಿಂದ ಪ್ರಗತಿಯ ವೇಗ ಹೆಚ್ಚುತ್ತದೆ. ಬಿಜೆಪಿ ಸರಕಾರದಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಇದು ನಿಲ್ಲಬಾರದು. ಅದಕ್ಕಾಗಿ ಕರುನಾಡಿನ ಜನ ಬಿಜೆಪಿಗೆ ಪೂರ್ಣ ಬಹುಮತದ ಅ ಧಿಕಾರ ನೀಡಬೇಕು ಎಂದರು.
ಬಿಜೆಪಿ ಸರಕಾರದ ಆಡಳಿತದಿಂದಾಗಿ ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಈ ಹಿಂದೆ ಪ್ರತಿ ವರ್ಷ 30 ಸಾವಿರ ಕೋಟಿ ರೂ. ಬರುತ್ತಿದ್ದ ಬಂಡವಾಳ ಈಗ 90 ಸಾವಿರ ಕೋಟಿ ರೂ.ಆಗಿದೆ. ಇದು ಕಾಂಗ್ರೆಸ್ ಸರಕಾರದ ಅವ ಧಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಕೋವಿಡ್ ಸಂಕಷ್ಟ, ಯುದ್ಧಗಳ ನಡುವೆಯೂ ಸಾಧನೆ ಆಗಿದೆ ಎಂದು ತಿಳಿಸಿದರು.
ಬಿಜೆಪಿ ಸರಕಾರ ಬಂದ ಮೇಲೆ ಲಕ್ಷಾಂತರ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಕೇಂದ್ರದ 6 ಸಾವಿರ ರೂ.ಗಳ ಜತೆಗೆ ರಾಜ್ಯ ಸರಕಾರ 4 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿರುವುದು ಖುಷಿಯ ಸಂಗತಿ. ಡಬಲ್ ಎಂಜಿನ್ ಸರಕಾರದಿಂದಾಗಿ ರಾಜ್ಯದಲ್ಲಿ ಇಂದು ಆಶ್ರಯ ಮನೆಗಳ ನಿರ್ಮಾಣದ ವೇಗವೂ ಹೆಚ್ಚಾಗಿದೆ. ಕುಡಿಯುವ ನೀರಿಗಾಗಿ ಮಹಿಳೆಯರು ಪಡುತ್ತಿದ್ದ ಕಷ್ಟಕ್ಕೆ ಇಂದು “ಹರ್ ಘರ್ ನಳ್’ ಕಾರ್ಯಕ್ರಮದಿಂದ ಮುಕ್ತಿ ಸಿಕ್ಕಿದೆ. ಕರ್ನಾಟಕದ 40 ಲಕ್ಷ ಒಳಗೊಂಡು ದೇಶದ 9 ಕೋಟಿ ಕುಟುಂಬಗಳಿಗೆ ಇಂದು ನಳ್ಳಿ ಮೂಲಕ ನೀರು ಸಿಗುವಂತಾಗಿದೆ ಎಂದರು.
ಮೋದಿ ಅವರನ್ನು ಪಕ್ಷದ ಜಿಲ್ಲಾ ಘಟಕದ ವತಿಯಿಂದ ಕಮಲದ ಹೂವುಗಳ ಹಾರ ಹಾಕಿ, ಬಿದ್ರಿ ಕಲೆಯ ಬಸವಣ್ಣನ ಭಾವಚಿತ್ರವನ್ನು ನೀಡಿ ಸಮ್ಮಾನಿಸಲಾಯಿತು. ಬೃಹತ್ ಸಭೆಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿ ಕ ಜನರು ಭಾಗವಹಿಸಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಭಗವಂತ ಖೂಬ, ರಾಜ್ಯ ಸಚಿವ ಪ್ರಭು ಚೌವ್ಹಾಣ್, ವಿಧಾನಪರಿಷತ್ ಸದಸ್ಯ ರಘುನಾಥ ರಾವ್ ಮಲ್ಕಾಪುರೆ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್. ರವಿಕುಮಾರ್, ಪಕ್ಷದ ಅಭ್ಯರ್ಥಿಗಳಾದ ಶರಣು ಸಲಗರ, ಸಿದ್ದು ಪಾಟೀಲ್, ಈಶ್ವರ ಸಿಂಗ್ ಠಾಕೂರ್, ಡಾ| ಶೈಲೇಂದ್ರ ಬೆಲ್ದಾಳೆ ಮತ್ತು ಪ್ರಕಾಶ ಖಂಡ್ರೆ ಭಾಗವಹಿಸಿದ್ದರು.