ಕರ್ಣಾಟಕ ಬ್ಯಾಂಕ್ ಮಾಜಿ ಸಿಇಒ ಪಿ.ಜಯರಾಮ ಭಟ್ ಹೃದಯಾಘಾತದಿಂದ ನಿಧನ
ಮಂಗಳೂರು, ಅಗಸ್ಟ್ 09: ಕರ್ಣಾಟಕ ಬ್ಯಾಂಕ್‌ನ ಮಾಜಿ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಪಿ.ಜಯರಾಮ ಭಟ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಇಂದು ಅಪರಾಹ್ನ ಮುಂಬಯಿನಿಂದ ವಿಮಾನದಲ್ಲಿ ಬಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಸಂದರ್ಭದಲ್ಲಿ ಅವರು ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆ. 2009ರ ಕರ್ನಾಟಕ ಬ್ಯಾಂಕ್ ನಲ್ಲಿ ಅಧಿಕಾರ ವಹಿಸಿಕೊಂಡಿದ್ದು ಮೂರು ಅವಧಿಗೆ ಬ್ಯಾಂಕ್ ನಾಯಕತ್ವ ವಹಿಸಿದ್ದರು.
ಅವರ ಅವಧಿಯಲ್ಲಿ ಇ-ಲಾಬಿ, ಮೊಬೈಲ್ ಬ್ಯಾಂಕಿಂಗ್, ಪಿಒಎಸ್, ಆನ್‌ಲೈನ್ ಟ್ರೇಡಿಂಗ್ ಅಕೌಂಟ್, ಟ್ರಾವೆಲ್ ಕಾರ್ಡ್, ಗಿಫ್ಟ್ ಕಾರ್ಡ್ ಮುಂತಾದ ಯಶಸ್ವಿ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರಿಂದ ಭಾರೀ ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲದೇ ಅವರ ಆಡಳಿತ ಅವಧಿಯಲ್ಲಿ ಕರ್ಣಾಟಕ ಬ್ಯಾಂಕ್ ಸರ್ವಾಂಗೀಣ ಪ್ರಗತಿ ಕಂಡಿತ್ತು. ಜಯರಾಮ್ ಭಟ್ ಅವರಿಗೆ ಅತ್ಯುತ್ತಮ ಮ್ಯಾನೇಜರ್ ಅವಾರ್ಡ್, ಅತ್ಯುತ್ತಮ ಸಾಧಾನಾ ಪ್ರಶಸ್ತಿ, ಮಣಿಪಾಲ ವಿವಿಯಿಂದ 2015ರ ಹೊಸ ವರ್ಷದ ಪ್ರಶಸ್ತಿ ಪಡೆದುಕೊಂಡಿದ್ದರು.
ಹೃದಯಾಘಾತ: ಯುವ ಸ್ಟಾಫ್ ನರ್ಸ್ ಸಾವು
ಉಡುಪಿ: ನಗರದ ಜಿಲ್ಲಾಸ್ಪತ್ರೆಯ 108 ಆ್ಯಂಬುಲೆನ್ಸ್ ಸ್ಟಾಫ್ ನರ್ಸ್ ರವಿ ಕುಮಾರ ಕೊಡಗೆರಾ (32) ಎಂಬವರು ಹೃದಯಾಘಾತದಿಂದ ಮೃತಪಟ್ಟಘಟನೆ ಮಂಗಳವಾರ ನಡೆದಿದೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಣಸಗೇರಾ ನಿವಾಸಿಯಾಗಿದ್ದ ರವಿ ಕುಮಾರ ಅವರು 6 ವರ್ಷದಿಂದ 108 ಆ್ಯಂಬುಲೆನ್ಸ್ ವಾಹನದಲ್ಲಿ ಸ್ಟಾಫ್ ನರ್ಸ್ ಆಗಿ ದುಡಿಯುತ್ತಿದ್ದರು. ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಅಸ್ವಸ್ಥಗೊಂಡಿದ್ದರು. ತಕ್ಷಣ ಚಿಕಿತ್ಸೆ ನೀಡಲಾಯಿತಾದರೂ, ಹೃದಯಾಘಾತದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.