ಕತ್ತು ಹಿಸುಕಿ ಮಗಳನ್ನೇ ಕೊಲೆಗೈದ ತಂದೆ ಅರೆಸ್ಟ್
ಲಕ್ನೋ: ತನ್ನ 20 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ನದಿಗೆ ಎಸೆದಿದ್ದ ಆರೋಪಿಯನ್ನು ಗುರುವಾರ ಉತ್ತರ ಪ್ರದೇಶದ (Uttar Pradesh) ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 2 ರಂದು ಮಹೌದಿಹ್ (Mahuadih) ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಿ ಗಂಡಕ್ (Chhoti Gandak river) ನದಿಯಲ್ಲಿ ಹೆಟಿಮ್ಪುರ್ ಮಥಿಯಾ (Hetimpur Mathia) ಗ್ರಾಮದ ಕಾಜಲ್ ಎಂಬವರ ಶವ ಪತ್ತೆಯಾಗಿತ್ತು. ಕೆಲವು ದಿನಗಳಿಂದ ಆಕೆ ಕಾಣೆಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ (Post mortem) ಆಕೆ ಗರ್ಭಿಣಿ (Pregnant) ಎಂದು ತಿಳಿದುಬಂದಿದ್ದು, ಆಕೆ ಗ್ರಾಮದ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಮತ್ತು ಆಕೆಯ ತಂದೆ ನೌಶಾದ್‍ಗೆ ಈ ಬಗ್ಗೆ ಯಾರೋ ಮಾಹಿತಿ ನೀಡಿದ್ದರು. ಇದರಿಂದ ಮನನೊಂದ ನೌಶಾದ್ ಕಾಜಲ್‍ನನ್ನು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಛೋಟಿ ಗಂಡಕ್ ನದಿಯಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೂ ಮುನ್ನ ನೌಶಾದ್ ಕುಟುಂಬದ ಸದಸ್ಯರನ್ನು ಧಾರ್ಮಿಕ ಸ್ಥಳಕ್ಕೆ (Religious place) ಕಳುಹಿಸಿದ್ದ. ನಂತರ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ್ದ. ವಿಚಾರಣೆಯ ಸಮಯದಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ ತಿಳಿಸಿದ್ದಾರೆ.