ಕಂಠಪೂರ್ತಿ ಕುಡಿದು ಬಸ್‌ನಲ್ಲಿ ಯುವತಿಯ ಸೀಟ್ ಮೇಲೆ ಮೂತ್ರವಿಸರ್ಜನೆ ಮಾಡಿದ ಭೂಪ
ಹುಬ್ಬಳ್ಳಿ: ಕಂಠಪೂರ್ತಿ ಮದ್ಯಪಾನ (Alcohol) ಮಾಡಿದ್ದ ವ್ಯಕ್ತಿಯೊಬ್ಬ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (KSRTC Bus) ಯುವತಿಯೊಬ್ಬಳ ಸೀಟ್ ಮೇಲೆ ಮೂತ್ರವಿಸರ್ಜನೆ (Urination) ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರದಿಂದ ಮಂಗಳೂರಿನ ಕಡೆ ಹೊರಟಿದ್ದ ಬಸ್‌ನಲ್ಲಿ 32 ವರ್ಷದ ಕುಡುಕ ಪ್ರಯಾಣಿಕನೊಬ್ಬ ಅನಾಗರಿಕ ಪ್ರದರ್ಶನ ತೋರಿದ್ದಾನೆ. ಕೆಎಸ್‌ಆರ್‌ಟಿಸಿಯ ಹವಾನಿಯಂತ್ರಿತವಲ್ಲದ ಸ್ಲೀಪರ್ ಬಸ್ ಅನ್ನು ಪ್ರಯಾಣದ ವೇಳೆ ನಡುವೆ ಹುಬ್ಬಳ್ಳಿ ಬಳಿಯ ಕಿರೆಸೂರು ಡಾಬಾ ಬಳಿ ಊಟಕ್ಕೆಂದು ನಿಲ್ಲಿಸಲಾಗಿತ್ತು. ಎಲ್ಲಾ ಪ್ರಯಾಣಿಕರು ಬಸ್‌ನಿಂದ ಇಳಿದು ಊಟಕ್ಕೆ ಹೋಗಿದ್ದರು. ಆದರೆ ಅದೇ ಬಸ್‌ನಲ್ಲಿದ್ದ ಕುಡುಕ ಪ್ರಯಾಣಿಕ ಬಸ್‌ನಿಂದ ಇಳಿಯಲಾರದೇ 3ನೇ ಸೀಟ್ ಮೇಲೆ ಕುಳಿತು ಮೂತ್ರ ವಿಸರ್ಜನೆ ಮಾಡಿದ್ದಾನೆ.
ಈ ಸೀಟ್‌ನಲ್ಲಿ 20 ವರ್ಷದ ಯುವತಿಯೊಬ್ಬಳು ಪ್ರಯಾಣ ಮಾಡುತ್ತಿದ್ದಳು. ಕುಡುಕ ಮೂತ್ರ ವಿಸರ್ಜನೆ ಮಾಡಿದ್ದ ವೇಳೆ ಆಕೆ ಊಟ ಮುಗಿಸಿಕೊಂಡು ವಾಪಾಸಾಗುತ್ತಿದ್ದಳು. ಆಗ ಕುಡುಕನ ವರ್ತನೆ ಕಂಡು ಯುವತಿ ಕೆಂಡಾಮಂಡಲವಾಗಿದ್ದಾಳೆ. ವಿಷಯವನ್ನು ಚಾಲಕ ಮತ್ತು ನಿರ್ವಾಹಕರಿಗೆ ತಿಳಿಸಿದ್ದಾಳೆ. ಬಳಿಕ ಕುಡುಕ ಪ್ರಯಾಣಿಕನಿಗೆ ಬಸ್ ಸಿಬ್ಬಂದಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು, ಯುವತಿಗೆ ಸೀಟ್ ಅನ್ನು ಬದಲಿಸಿ ಕೊಟ್ಟಿದ್ದಾರೆ.
ಮಾತ್ರ ವಿಸರ್ಜನೆ ಮಾಡಿದ ವ್ಯಕ್ತಿ ನಿಲ್ಲಲು ಸಾಧ್ಯವಾಗದಷ್ಟು ಮದ್ಯಪಾನ ಮಾಡಿದ್ದು, ಆತನ ಮೈ ಮೇಲೆ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿದ್ದ ಎನ್ನಲಾಗಿದೆ. ಈ ಬಗ್ಗೆ ಯುವತಿ ದೂರು ನೀಡಲು ಹಿಂದೇಟು ಹಾಕಿದ್ದಾಳೆ. ಬಸ್ ಚಾಲಕ ಸಂತೋಷ್ ಹಾಗೂ ನಿರ್ವಾಹಕ ಉಮೇಶ್ ಈ ಬಗ್ಗೆ ವಿಭಾಗೀಯ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ.