ಐಷಾರಾಮಿ ಬಸ್-ಎಸ್‌ಯುವಿ ಡಿಕ್ಕಿ: ಒಂಬತ್ತು ಮಂದಿ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ
ನವಸಾರಿ: ಹೊಸ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಗುಜರಾತ್‌ನ ನವಸಾರಿಯಲ್ಲಿ ಐಷಾರಾಮಿ ಬಸ್ ಮತ್ತು ಎಸ್‌ಯುವಿ ನಡುವೆ ಡಿಕ್ಕಿ ಸಂಭವಿಸಿ ಒಂಬತ್ತು ಜನರು ಮೃತಪಟ್ಟು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನವಸಾರಿ ಜಿಲ್ಲೆಯ ರೇಷ್ಮಾ ಗ್ರಾಮದಲ್ಲಿ ಇಂದು ನಸುಕಿನ ಜಾವ ಈ ದುರ್ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಅಹಮದಾಬಾದ್-ಮುಂಬೈ ಹೆದ್ದಾರಿಯಲ್ಲಿ ಬಸ್ಸು ಮತ್ತು ಎಸ್ ಯುವಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಒಟ್ಟು 9 ಮಂದಿ ಸಾವಿಗೀಡಾಗಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ವಿ ಎನ್ ಪಟೇಲ್ ತಿಳಿಸಿದ್ದಾರೆ.
ದುರ್ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಖೇದ ವ್ಯಕ್ತಪಡಿಸಿದ್ದಾರೆ. ನವಸಾರಿಯಲ್ಲಿ ಅಪಘಾತವಾದ ಸುದ್ದಿ ಕೇಳಿ ಮನಸ್ಸಿಗೆ ನೋವಾಗಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬದವರಿಗೆ ಸಂತಾಪಗಳು. ದೇವರು ಅವರಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ಸ್ಥಳೀಯ ಆಡಳಿತ ಗಾಯಗೊಂಡವರ ಚಿಕಿತ್ಸೆಗೆ ಸಕಲ ಏರ್ಪಾಡು ಮಾಡಿದೆ ಎಂದು ಬರೆದುಕೊಂಡಿದ್ದಾರೆ.