ಐಪಿಎಸ್ ಅಧಿಕಾರಿಯ ಕಾರು ಡ್ಯಾಮೇಜ್ ಪ್ರಕರಣ; ನಟಿ ಡಿಂಪಲ್ ಹಯಾತಿ ವಿರುದ್ಧ ಕೇಸ್ ದಾಖಲು
ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ (Rahul Hegde) ಹಾಗೂ ಟಾಲಿವುಡ್ ನಟಿ ಡಿಂಪಲ್ ಹಯಾತಿ (Dimple Hayathi) ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಕಿತ್ತಾಟ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಪೊಲೀಸ್ ಅಧಿಕಾರಿಯ ಕಾರನ್ನು ಡ್ಯಾಮೇಜ್ ಮಾಡಿದ ಆರೋಪದ ಮೇಲೆ ನಟಿ ಡಿಂಪಲ್ ಹಯಾತಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಇದು ನಟಿಯ ಕೋಪಕ್ಕೆ ಕಾರಣ ಆಗಿದೆ. ನಟಿ ಕಿರಿಕ್ ಮಾಡಿಕೊಂಡಿರುವುದರಿಂದ ಒಂದಷ್ಟು ಆಫರ್ಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಡಿಂಪಲ್ ಹಯಾತಿ ಹಾಗೂ ಅವರ ಗೆಳೆಯ ವಿಕ್ಟರ್ ಹೈದರಾಬಾದ್ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದಾರೆ. ಇದೇ ಅಪಾರ್ಟ್ಮೆಂಟ್ನಲ್ಲಿ ಹೈದರಾಬಾದ್ನ ಟ್ರಾಫಿಕ್ ಪೊಲೀಸ್ ಡೆಪ್ಯೂಟಿ ಕಮೀಷನರ್, ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಸಹ ವಾಸವಿದ್ದಾರೆ. ಇವರ ಮಧ್ಯೆ ಕೆಲ ಸಮಯದಿಂದ ಪಾರ್ಕಿಂಗ್ ವಿಚಾರದಲ್ಲಿ ಕಿತ್ತಾಟ ನಡೆದಿದೆ. ನಟಿ ಈ ವಿಚಾರದಲ್ಲಿ ರಿವೇಂಜ್ ತೆಗೆದುಕೊಂಡಿದ್ದಾರೆ.
ಮೇ 14ರಂದು ಡಿಂಪಲ್ ಹಯಾತಿ ಅವರು ರಾಹುಲ್ ಕಾರಿಗೆ ಡ್ಯಾಮೇಜ್ ಮಾಡಿದ್ದಾರೆ. ಇದು ಉದ್ದೇಶಪೂರ್ವಕವಾಗಿತ್ತು ಎಂಬುದಕ್ಕೆ ಸಿಸಿಟಿವಿ ದೃಶ್ಯಗಳು ಸಾಕ್ಷ್ಯ ಒದಗಿಸಿವೆ. ಇದನ್ನು ಆಧರಿಸಿ ನಟಿಯ ವಿರುದ್ಧ ರಾಹುಲ್ ಅವರ ಕಾರು ಡ್ರೈವರ್ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಡಿಂಪಲ್ ಹಯಾತಿಗೆ ಸಮನ್ಸ್ ನೀಡಲಾಗಿದೆ. ಸೋಮವಾರ (ಮೇ 29) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ನಟಿ ಡಿಂಪಲ್ ಹಯಾತಿಯಿಂದ ರಾಹುಲ್ ಅವರಿಗೆ ಸಾಕಷ್ಟು ತೊಂದರೆ ಆಗಿದೆಯಂತೆ. ಎಲ್ಲಾದರೂ ತುರ್ತಾಗಿ ತೆರಳುವಾಗ ನಟಿ ಹೋಗುವ ದಾರಿಯನ್ನು ಬ್ಲಾಕ್ ಮಾಡಿ ರಾಹುಲ್ಗೆ ತೊಂದರೆ ಕೊಡುತ್ತಿದ್ದರಂತೆ. ಇಷ್ಟು ದಿನ ಅವರು ಇದನ್ನು ಸಹಿಸಿಕೊಂಡಿದ್ದರು. ಈಗ ಕಾರಿಗೆ ಹಾನಿ ಆಗಿರುವುದರಿಂದ ಅವರು ದೂರು ದಾಖಲು ಮಾಡಿದ್ದಾರೆ. ಸದ್ಯ ಈ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಡಿಂಪಲ್ ಹಯಾತಿ ಅವರಿಗೆ ಈಗಿನ್ನೂ 24 ವರ್ಷ. 2017ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಗಲ್ಫ್’ ಅವರ ನಟನೆಯ ಮೊದಲ ಸಿನಿಮಾ. ಇತ್ತೀಚೆಗೆ ಅವರ ನಟನೆಯ ‘ರಾಮಬನಂ’ ಸಿನಿಮಾ ರಿಲೀಸ್ ಆಯಿತು.