ಐಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ವಿರಾಟ್ ಕೊಹ್ಲಿ

ನವದೆಹಲಿ(ಮೇ.07): ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ 7 ಸಾವಿರ ರನ್ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ನಿರ್ಮಿಸಿದ್ದಾರೆ
ಐಪಿಎಲ್ ವೃತ್ತಿಜೀವನದ 233ನೇ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ, ತಮ್ಮ ತವರಿನ ಮೈದಾನದಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾದರು. ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್, ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, 213 ಐಪಿಎಲ್ ಪಂದ್ಯಗಳನ್ನಾಡಿ 6,536 ರನ್ ಬಾರಿಸಿದ್ದಾರೆ. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್(6189 ರನ್, 171 ಪಂದ್ಯ) ಮತ್ತು ರೋಹಿತ್ ಶರ್ಮಾ(6063 ರನ್, 237 ಪಂದ್ಯ) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ. ವಿರಾಟ್ ಕೊಹ್ಲಿ, 2016ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿ 4 ಶತಕ ಸಹಿತ 973 ರನ್ ಚಚ್ಚಿದ್ದರು. ಈ ದಾಖಲೆ ಸದ್ಯಕ್ಕಂತೂ ಬ್ರೇಕ್ ಆಗುವುದು ಅನುಮಾನ ಎನಿಸಿದೆ.
ಇನ್ನು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ವಿರಾಟ್ ಕೊಹ್ಲಿ ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ಇದುವರೆಗೂ ವಿರಾಟ್ ಕೊಹ್ಲಿ 10 ಐಪಿಎಲ್ ಪಂದ್ಯಗಳನ್ನಾಡಿ 46.56ರ ಬ್ಯಾಟಿಂಗ್ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 419 ರನ್ ಸಿಡಿಸಿದ್ದಾರೆ. ಈ ಮೂಲಕ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸದ್ಯ ವಿರಾಟ್ ಕೊಹ್ಲಿ, ನಾಲ್ಕನೇ ಸ್ಥಾನದಲ್ಲಿದ್ದಾರೆ.