ಐದು ಅಂತಸ್ತಿನ ಕಟ್ಟಡ ಕುಸಿತ; ಕಾರ್ಟೂನ್‌ನಿಂದ ಕಲಿತ ಪಾಠದಿಂದ ಜೀವ ಉಳಿಸಿಕೊಂಡ 6ರ ಬಾಲಕ!
ಲಖನೌ: ಮಕ್ಕಳು ದಿನವಿಡೀ ಕಾರ್ಟೂನ್ ನೋಡುತ್ತಾ ಕಾಲ ಕಳೆಯುತ್ತಾರೆ, ಓದು ಬರಹದ ಬಗ್ಗೆ ಆಸಕ್ತಿಯೇ ಇಲ್ಲ ಎನ್ನುವುದು ಪೋಷಕರ ದೂರು. ಕೆಲವು ಮಕ್ಕಳು ಕಾರ್ಟೂನ್‌ಗಳ ಮೂಲಕವೇ ಹೆಚ್ಚು ಕಲಿಯುತ್ತಾರೆ. ಮಕ್ಕಳ ಮೇಲೆ ಕಾರ್ಟೂನ್ ಪ್ರಭಾವ ಹೆಚ್ಚು. ಅದು ಮಕ್ಕಳ ಬುದ್ಧಿಶಕ್ತಿ, ಚತುರತೆಗೆ ಕೂಡ ನೆರವಾಗುತ್ತದೆ ಎಂಬುದಕ್ಕೆ ಸಾಕ್ಷಿಯೊಂದು ದೊರೆತಿದೆ.
ಜನಪ್ರಿಯ ಕಾರ್ಟೂನ್ ಒಂದು ಉತ್ತರ ಪ್ರದೇಶದ ಲಖನೌದಲ್ಲಿ ಆರು ವರ್ಷದ ಬಾಲಕನ ಜೀವ ಉಳಿಸಲು ನೆರವಾಗಿದೆ. ಭೂಕಂಪನದಂತಹ ಅವಘಡದ ಸಂದರ್ಭದಲ್ಲಿ ಸುರಕ್ಷಿತರಾಗುವುದು ಹೇಗೆ ಎಂಬುದನ್ನು ಕಾರ್ಟೂನ್ ಮೂಲಕ ಕಲಿತಿದ್ದ ಮುಸ್ತಫಾ ಎಂಬ ಬಾಲಕ, ಮಂಗಳವಾರ ಸಂಜೆ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡವೊಂದು ಹಠಾತ್ ಕುಸಿದಾಗ, ಆಶ್ಚರ್ಯಕರ ರೀತಿಯಲ್ಲಿ ತನ್ನ ಜೀವ ಉಳಿಸಿಕೊಂಡಿದ್ದಾನೆ.
ಆದರೆ ಈ ದುರ್ಘಟನೆಯಲ್ಲಿ ಆತನ ತಾಯಿ ಉಜ್ಮಾ ಹೈದರ್ ಮತ್ತು ಅಜ್ಜಿ ಬೇಗಂ ಹೈದರ್ ಬಲಿಯಾಗಿದ್ದಾರೆ. ಮುಸ್ತಫಾ ಸೇರಿದಂತೆ 14 ಮಂದಿ ಬದುಕುಳಿದಿದ್ದು, ಅವರನ್ನು ಎಸ್‌ಪಿಎಂ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
“ಕಟ್ಟಡ ಕುಸಿಯುವುದಕ್ಕೂ ಮುನ್ನ ನಗರದಲ್ಲಿ ಸಣ್ಣ ಕಂಪನದ ಅನುಭವ ಉಂಟಾಗಿತ್ತು. ಆಗ ಭೂಕಂಪನದ ಸಂದರ್ಭದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳನ್ನು ನಾನು ನೆನಪಿಸಿಕೊಂಡಿದ್ದೆ” ಎಂದು ಆರು ವರ್ಷದ ಮುಸ್ತಫಾ ತಿಳಿಸಿದ್ದಾನೆ.
“ಕಟ್ಟಡ ನಲುಗಿದಾಗ ನಗರದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ಭಾವಿಸಿದ್ದೆ. ನನಗೆ ಬಹಳ ಭಯವಾಗಿತ್ತು. ಆದರೆ ‘ಡೊರೇಮಾನ್’ ಕಾರ್ಟೂನ್‌ನ ಸರಣಿಯಲ್ಲಿ ನೊಬಿಟಾ (ಸರಣಿಯ ಪ್ರಮುಖ ಪಾತ್ರ), ಭೂಕಂಪನದ ವೇಳೆ ಮೂಲೆಗಳಲ್ಲಿ ಅಥವಾ ಮಂಚದ ಅಡಿಯಲ್ಲಿ ರಕ್ಷಣೆ ಪಡೆದುಕೊಳ್ಳುವ ಮೂಲಕ ತನ್ನನ್ನು ಉಳಿಸಿಕೊಳ್ಳುವ ಕಂತನ್ನು ನೆನಪಿಸಿಕೊಂಡಿದ್ದೆ” ಎಂದು ವಿವರಿಸಿದ್ದಾನೆ.
“ಒಂದು ಕ್ಷಣ ಕೂಡ ವ್ಯರ್ಥ ಮಾಡದೆ ನಾನು ಹಾಸಿಗೆ ಅಡಿ ನುಗ್ಗಿದ್ದೆ. ಅಮ್ಮ ಕಿರುಚುತ್ತಾ ಓಡುವುದನ್ನು ಕಂಡಿದ್ದೆ. ನೋಡ ನೋಡುತ್ತಿದ್ದಂತೆಯೇ ಇಡೀ ಕಟ್ಟಡ ಕುಸಿದುಬಿತ್ತು. ಎಲ್ಲ ಕಡೆಯೂ ಕತ್ತಲು ಆವರಿಸಿತ್ತು” ಎಂದು ಆ ಭಯಾನಕ ಕ್ಷಣವನ್ನು ಹಂಚಿಕೊಂಡಿದ್ದಾನೆ.
ಸಮಾಜವಾದಿ ಪಕ್ಷದ ವಕ್ತಾರರಾಗಿರುವ ಮುಸ್ತಫಾ ತಂದೆ ಅಬ್ಬಾಸ್ ಹೈದರ್ ಅವರು ಅವಘಡದ ವೇಳೆ ಮನೆಯಲ್ಲಿ ಇರಲಿಲ್ಲ. ಮುಸ್ತಫಾನ ಅಜ್ಜ, ಹಿರಿಯ ಕಾಂಗ್ರೆಸ್ ಮುಖಂಡ ಅಮೀರ್ ಹೈದರ್ ಅವರು ಘಟನೆಯಲ್ಲಿ ಬದುಕುಳಿದಿದ್ದಾರೆ.
ಸೋಮವಾರವಷ್ಟೇ ಮುಸ್ತಫಾನ ಅಜ್ಜ- ಅಜ್ಜಿಯ 50ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಈ ಕುಟುಂಬ ಆಚರಿಸಿತ್ತು. ಮಂಚದ ಅಡಿಯಲ್ಲಿ ಬಚ್ಚಿಟ್ಟುಕೊಂಡ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಸ್‌ಪಿಎಂ ಆಸ್ಪತ್ರೆಯ ಮತ್ತೊಂದು ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಅಜ್ಜ, ತೀವ್ರ ಆಘಾತಕ್ಕೆ ಒಳಗಾಗಿದ್ದು ಮಾತನಾಡುವ ಸ್ಥಿತಿಯಲ್ಲಿಲ್ಲ. ಅಮ್ಮ ಮೃತಪಟ್ಟ ಸಂಗತಿಯನ್ನು ಬಾಲಕನಿಗೆ ಇನ್ನೂ ತಿಳಿಸಿರಲಿಲ್ಲ.
ಲಖನೌದ ಅಲಯಾ ಅಪಾರ್ಟ್‌ಮೆಂಟ್ ಕುಸಿತ ಪ್ರಕರಣದಲ್ಲಿ ಒಟ್ಟು ಮೂರು ಮಂದಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಅಪಾರ್ಟ್‌ಮೆಂಟ್ ಬಿಲ್ಡರ್ ಮತ್ತು ಮಾಲೀಕರಾದ ಮೊಹಮ್ಮದ್ ತಾರಿಖ್, ನವಾಜಿಶ್ ಶಾಹಿದ್ ಮತ್ತು ಫಹಾದ್ ಯಜ್ದಾನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.