ಏ.27ರಂದು 50 ಲಕ್ಷ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಮೋದಿ ಸಂವಾದ!
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಬೆರಳೆಣಿಕೆಯಷ್ಟು ದಿನಗಳು ಬಾಕಿ ಇದ್ದು ರಾಜ್ಯ ರಾಜಕೀಯ ವಲಯ ರಂಗೇರಿದೆ. ಹೀಗಾಗಿ ಬಿಜೆಪಿ ಮತದಾರರ ಮತ ಸೆಳೆಯಲು ಭರ್ಜರಿ ಪ್ರಚಾರ ನಡೆಸುತ್ತಿದೆ. ರಾಷ್ಟ್ರ ನಾಯಕರು ರಾಜ್ಯದಲ್ಲಿ ಬೀಡುಬಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾರ್ಯಕರ್ತರನ್ನು ಸಂಘಟಿಸಲು ಮೋದಿ(Narendra Modi) ಮುಂದಾಗಿದ್ದು ಏ.27ರಂದು ಕಾರ್ಯಕರ್ತರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಏ.27ರಂದು ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ರಾಜ್ಯದ 50 ಲಕ್ಷ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಸಂವಾದ ನಡೆಯಲಿದೆ. 1680 ಜಿ.ಪಂ.ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಂವಾದ ಕಾರ್ಯಕ್ರಮ ವೀಕ್ಷಣೆಗೆ 650 ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ. 24 ಲಕ್ಷ ಕಾರ್ಯಕರ್ತರಿಗೆ ಮೋದಿ ಆ್ಯಪ್ ಲಿಂಕ್ ಕಳುಹಿಸಿದ್ದೇವೆ. ಮೋದಿ ಆ್ಯಪ್ ಮೂಲಕವೂ ಸಂವಾದ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.
ಸುಪ್ರೀಂಕೋರ್ಟ್ಗೆ ನಾವು ಮೇಲ್ಮನವಿ ಸಲ್ಲಿಸುತ್ತೇವೆ
ಇನ್ನು ಇದೇ ವೇಳೆ ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ವಿಚಾರಕ್ಕೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದರು. ಸಂವಿಧಾನ ಪ್ರಕಾರ ಅಲ್ಪಸಂಖ್ಯಾತರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡುವ ಬಗ್ಗೆ ಎಲ್ಲಿಯೂ ಇಲ್ಲ. ಆದರೆ ನಾವು ಸುಪ್ರೀಂ ಕೋರ್ಟ್ ಗೆ ಮತ್ತೊಮ್ಮೆ ಮನವಿ ಮಾಡುತ್ತೇವೆ. 4% ಮೀಸಲಾತಿ ತೆಗೆಯುವ ನಿರ್ಧಾರಕ್ಕೆ ಈಗಲೂ ನಾವು ಬದ್ದರಿದ್ದೇವೆ. ಹಿಂದೆ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಈ ಮೀಸಲಾತಿ ನಿರ್ಣಯ ಮಾಡಿದ್ದರು. ನಾವು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡುತ್ತೇವೆ. ಸುಪ್ರೀಂ ಕೋರ್ಟ್ ತಡೆಗೆ ನಮ್ಮ ಸಮ್ಮತಿ ಇಲ್ಲ. ಸುಪ್ರೀಂಕೋರ್ಟ್ ಕೂಡ ಸಂವಿಧಾನದಡಿಯಲ್ಲಿ ಕೆಲಸ ಮಾಡಲು ನಾವು ಮನವಿ ಮಾಡುತ್ತೇವೆ. ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ನಮ್ಮ ವಿರೋಧವಿದೆ. ಸುಪ್ರೀಂಕೋರ್ಟ್ಗೆ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.