ಎರಡು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸುಳಿವು ನೀಡಿದ ರಾಮಲಿಂಗರೆಡ್ಡಿ!
ಬೆಂಗಳೂರು: ನಾವು ಅಧಿಕಾರಕ್ಕೆ ಬಂದಿದ್ದೇವೆ. ಇನ್ನು ಎರಡು ಮೂರು ತಿಂಗಳಲ್ಲಿ ಬಿಬಿಎಂಪಿ (BBMP) ಚುನಾವಣೆ ಮಾಡುತ್ತೇವೆ ಎಂದು ಸಚಿವ ರಾಮಲಿಂಗರೆಡ್ಡಿ (Ramalinga Reddy) ಸುಳಿವೊಂದನ್ನು ನೀಡಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಶನಿವಾರ ಸಿದ್ದರಾಮಯ್ಯ (Siddaramaiah) ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಅವರೊಂದಿಗೆ 8 ಮಂದಿ ಶಾಸಕರೂ ಸಹ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಿರಿಯ ನಾಯಕರಾದ ರಾಮಲಿಂಗರೆಡ್ಡಿಯವರಿಗೆ ಸಚಿವ ಸ್ಥಾನ ಸಿಕ್ಕಿದೆ.
ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇವೆ. ಬೆಂಗಳೂರನ್ನು (Bengaluru) ಮತ್ತಷ್ಟು ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಜನ ನಿರೀಕ್ಷೆಯಿಟ್ಟು ಕಾಂಗ್ರೆಸ್ (Congress) ಪಕ್ಷಕ್ಕೆ ಬಹುಮತವನ್ನು ನೀಡಿದ್ದಾರೆ. ಆ ಬಹುಮತ ನೀಡಿದ್ದಕ್ಕಾಗಿ ಆಶ್ವಾಸನೆ ಕೊಟ್ಟಿರುವಂತೆ ಅದನ್ನು ಈಡೇರಿಸುವ ಮುಖಾಂತರ ಬಿಜೆಪಿ (BJP) ಪಕ್ಷಕ್ಕಿಂತಲೂ ವಿಭಿನ್ನವಾಗಿ ಕೆಲಸ ಮಾಡುವ ಮುಖಾಂತರ ಜನರ ವಿಶ್ವಾಸವನ್ನು ಉಳಿಸಿಕೊಂಡು ಹೋಗುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಾಕಷ್ಟು ತೊಂದರೆಗಳಾಯಿತು. ಅವರಿಗೆ ಜನರ ಆದಾಯ ಜಾಸ್ತಿಯಾಗಲಿಲ್ಲ. ಖರ್ಚು ಮಾತ್ರ ಜಾಸ್ತಿ ಆಯ್ತು. ಆ ದಿಕ್ಕಲ್ಲಿ ನಮ್ಮ ಸರ್ಕಾರ ವಿಶೇಷವಾಗಿ ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಅನೇಕ ಕಾರ್ಯಕ್ರಮಗಳನ್ನು ನಾವು ಚುನಾವಣೆಯ ಮೊದಲು ಘೋಷಣೆ ಮಾಡಿದ್ದೇವೆ. ಅದನ್ನು ಜಾರಿಗೆ ತರಬೇಕು ಎಂದರು.
ಅನೇಕ ಡಿಸಿಎಂಗಳಿದ್ದರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಒಬ್ಬರು ಸಿಎಂ ಹಾಗೂ ಒಬ್ಬರು ಡಿಸಿಎಂ ಇದ್ದಾರೆ. ಮುಂಜಾನೆ ಮೂರೂವರೆಯಲ್ಲಿ ವೇಣುಗೋಪಾಲ್ ಕಾಲ್ ಮಾಡಿದ್ದರು. ಮುಖ್ಯಮಂತ್ರಿ ಆಗುತ್ತಿರುವ ಸಿದ್ದರಾಮಯ್ಯ ಅವರು ಗವರ್ನರ್ ಲೆಟರ್ ಬರೆದಿದ್ದರು. ಕಾಲ್ ಮಾಡಿದ ಮೇಲೆ ಸಚಿವ ಸ್ಥಾನ ಸಿಕ್ಕಿದೆ ಎಂದು ಗೊತ್ತಾಯಿತು. 28 ಜನ ಸಚಿವರ ಹೆಸರು ಇದೆ ಆದರೆ ನನಗೆ ಹಿರಿಯ ಎನ್ನುವ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ. ಯಾವುದೇ ಖಾತೆಯನ್ನು ನೀಡಿದರೂ ನಿಭಾಯಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.