ಉಮೇಶ್ ಪಾಲ್ ಮೇಲೆ ಗುಂಡು ಹಾರಿಸಿದ್ದ ಆರೋಪಿ ಎನ್ಕೌಂಟರ್ನಲ್ಲಿ ಸಾವು
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ. ವಿಜಯ್ ಕುಮಾರ್ ಅಲಿಯಾಸ್ ಉಸ್ಮಾನ್ ಚೌಧರಿಯನ್ನು ಎನ್ಕೌಂಟರ್ನಲ್ಲಿ ಹತ್ಯೆಗೈಯಲಾಗಿದೆ, ಉಮೇಶ್ ಪಾಲ್ಗೆ ಮೊದಲು ಗುಂಡು ಹಾರಿಸಿದ್ದು ಈತನೇ ಎಂದು ಹೇಳಲಾಗುತ್ತಿದೆ. ಪ್ರಯಾಗ್ರಾಜ್ನ ಕೌಂಧಿಯಾರ ಪ್ರದೇಶದಲ್ಲಿ ಈ ಎನ್ಕೌಂಟರ್ ನಡೆದಿದೆ, ಈ ವೇಳೆ ಉಸ್ಮಾನ್ ಚೌಧರಿ ಮೇಲೆ ಗುಂಡು ಹಾರಿಸಲಾಗಿತ್ತು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಇದು ಎರಡನೇ ಎನ್ಕೌಂಟರ್ ಆಗಿದೆ. ಇದಕ್ಕೂ ಮುನ್ನ ಅತೀಕ್ ಅಹ್ಮದ್ನ ಆಪ್ತ ಸಹಾಯಕ ಅರ್ಬಾಜ್ನನ್ನು ಕೊಂದಿದ್ದರು. ಉಮೇಶ್ ಪಾಲ್ ಹತ್ಯೆಗೆ ಬಳಸಿದ್ದ ಕ್ರೆಟಾ ಕಾರ್ನ್ನು ಅರ್ಬಾಜ್ ಓಡಿಸುತ್ತಿದ್ದ, ಉಮೇಶ್ ಪಾಲ್ ಹಾಗೂ ಅವರ ಇಬ್ಬರು ಗನ್ನರ್ಗಳನ್ನು ಫೆಬ್ರವರಿ 24 ರಂದು ಪ್ರಯಾಗ್‌ರಾಜ್‌ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ರಾಜುಪಾಲ್ ಹತ್ಯೆ ಪ್ರಕರಣದಲ್ಲಿ ಉಮೇಶ್ ಪಾಲ್ ಸಾಕ್ಷಿಯಾಗಿದ್ದರು, ಉಮೇಶ್ ಕಾರಿನಿಂದ ಇಳಿದ ತಕ್ಷಣ ಆತನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಉಮೇಶ್ ಪಾಲ್ ಹತ್ಯೆಯ ಪ್ರಮುಖ ಆರೋಪಿ ಇದೀಗ ಸಬರಮತಿ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವಾಗಲೇ ಅತೀಕ್ ಸಂಪೂರ್ಣ ಸಂಚು ರೂಪಿಸಿದ್ದ, ಆತ ರಾಜು ಪಾಲ್ ಹತ್ಯೆಯಲ್ಲೂ ಪ್ರಮುಖ ಆರೋಪಿಯಾಗಿದ್ದ.
ಉಮೇಶ್ ಪಾಲ್ ಪತ್ನಿ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಅತೀಕ್ ಅಹ್ಮದ್, ಪತ್ನಿ ಶೈಸ್ತಾ ಪರ್ವೀನ್, ಇಬ್ಬರು ಪುತ್ರರ ವಿರುದ್ಧ ಪ್ರಕರಣ ದಾಖಲಾಗಿದೆ.