ಉಪ್ಪಿನಂಗಡಿ-ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಅರೆಸ್ಟ್
ಉಪ್ಪಿನಂಗಡಿ, ಜ 01: ನೆಲ್ಯಾಡಿ ಗ್ರಾಮದ ಪುಚ್ಚೇರಿ ಎಂಬಲ್ಲಿ ಶಾಲಾ ವಾರ್ಷಿಕೋತ್ಸವದ ಖುಷಿಯಲ್ಲಿದ್ದ ಬಾಲಕಿಯನ್ನು ಮನೆಗೆ ಕರೆದೊಯ್ಯುವ ಭರವಸೆ ನೀಡಿ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆಕೆಯ ಮನೆ ಸಮೀಪದ ನಿವಾಸಿ ಚೇತನ್ ಬಂಧಿತ ಆರೋಪಿ. ಡಿಸೆಂಬರ್ 29ರಂದು ಶಾಲೆಯಲ್ಲಿ ವಾರ್ಷಿಕೋತ್ಸವ ಇದ್ದ ಹಿನ್ನೆಲೆಯಲ್ಲಿ 14ರ ಹರೆಯದ ಬಾಲಕಿಯು ಹೆತ್ತವರು, ಅಜ್ಜ ಹಾಗೂ ತಂಗಿಯ ಜೊತೆಗೆ ಶಾಲೆಗೆ ಹೋಗಿದ್ದಳು. ಆದರೆ ವಾರ್ಷಿಕೋತ್ಸವ ಮುಗಿದ ಮೇಲೆ ಮನೆಗೆ ಬರುತ್ತೇನೆಂದು ಆಕೆ ತಿಳಿಸಿದ ಹಿನ್ನೆಲೆಯಲ್ಲಿ ಹೆತ್ತವರು ಮನೆಗೆ ಹಿಂದಿರುಗಿದ್ದರು. ಈ ವೇಳೆ ಆಕೆಯ ಮನೆ ಸಮೀಪದ ಚೇತನ್ ಎಂಬಾತ ಮನೆಗೆ ತಾನು ಕರೆದೊಯ್ಯುತ್ತೇನೆಂದು ನಂಬಿಸಿ ಆಕೆಯನ್ನು ತನ್ನ ಬೈಕ್‌ನಲ್ಲಿ ಕರೆದೊಯ್ದಿದ್ದ. ಆದರೆ ಮನೆಗೆ ಕರೆದೊಯ್ಯುವ ಬದಲು ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಮಧ್ಯರಾತ್ರಿ ಕಾಡಿನಲ್ಲೇ ಬಿಟ್ಟು ಹೋಗಿದ್ದಾನೆ.
ಇತ್ತ ಬಾಲಕಿ ಮನೆಗೆ ಬರಲಿಲ್ಲವೆಂದು ಆತಂಕಗೊಂಡ ಹೆತ್ತವರು ಹುಡುಕಾಡಿದಾಗ ಗುಡ್ಡದಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಬಳಿಕ ಆಕೆಯನ್ನು ವಿಚಾರಿಸಿದಾಗ ಆರೋಪಿಯ ಕೃತ್ಯವನ್ನು ಆಕೆ ವಿವರಿಸಿದ್ದಾಳೆ. ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಶನಿವಾರ ಆತನನ್ನು ಬಂಧಿಸಿದ್ದಾರೆ.