ಉತ್ತರ ಕನ್ನಡದಲ್ಲಿ ಮತ್ತೆ ಭೂಕುಸಿತದ ಆತಂಕ
ಕಾರವಾರ: ಹಿಮಾಲಯದ ಜೋಶಿಮಠದಲ್ಲಿ ಭೂ ಕುಸಿತ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಆದರೆ ಇದೀಗ ಭೂವಿಜ್ಞಾನಿಗಳು ನೀಡಿದ ವರದಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಮತ್ತೆ ಭೂಕುಸಿತದ ಆತಂಕ ಕಾಡುವಂತೆ ಮಾಡಿದ್ದು, ಇದೀಗ ಉತ್ತರ ಕನ್ನಡ (Uttara Kannada) ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.
ಹೌದು.. ಕಳೆದ 3 ವರ್ಷಗಳಿಂದ ಪಶ್ಚಿಮಘಟ್ಟವನ್ನು ಹಂಚಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಭೂ ಕುಸಿತ (LandSlide), ಪ್ರವಾಹ (Flood) ಸಮಸ್ಯೆಗಳು ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಕಳೆದ 3 ವರ್ಷಗಳಿಂದ ಉತ್ತರ ಕನ್ನಡ ಭಾಗದಲ್ಲಿ ನಿರಂತರ ಅಧ್ಯಯನ ಕೈಗೊಂಡಿದೆ. ಕಳೆದ ವಾರ ಜಿಲ್ಲಾಡಳಿತಕ್ಕೆ ಸಲ್ಲಿಸಿದ ವರದಿಯಲ್ಲಿ ಮತ್ತೆ ಭೂ ಕುಸಿತವಾಗುವ ಎಚ್ಚರಿಕೆಯನ್ನು ನೀಡಿದೆ.
ಈ ಹಿಂದೆ ವಾಡಿಕೆಗಿಂತ ಹೆಚ್ಚು ಮಳೆಯಾದ್ದರಿಂದ ಕಾರವಾರ, ಭಟ್ಕಳ, ಕುಮಟಾ, ಶಿರಸಿ ಭಾಗದಲ್ಲಿ ಭೂಕುಸಿತ ಉಂಟಾಗಿ ಅನೇಕರು ಮನೆಗಳನ್ನು ಕಳೆದುಕೊಂಡಿದ್ದರು. 63 ಜನರು ಸಾವನ್ನಪ್ಪಿದ್ದರು. ಭೂ ಕುಸಿತಕ್ಕೆ ಹೆದ್ದಾರಿ ಅಗಲೀಕರಣಕ್ಕೆ ಅವೈಜ್ಞಾನಿಕ ಗುಡ್ಡ ಕೊರೆತ, ಅರಣ್ಯನಾಶ, ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾರಣ ಅಂತ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ವರದಿ ನೀಡಿದೆ. ಘಟ್ಟ ಪ್ರದೇಶದ ಮಣ್ಣಿನ ಪದರ ಸಡಿಲವಾಗಿದ್ದು, ಅರಣ್ಯ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಗೆ ತಡೆಯೊಡ್ಡದಿದ್ದರೇ ಮತ್ತೆ ಭೂಕುಸಿತವಾಗಿ ದೊಡ್ಡ ಹಾನಿ ಸಂಭವಿಸುವ ಎಚ್ಚರಿಕೆ ನೀಡಿದೆ.
ಈ ಕುರಿತು ಜಿಲ್ಲಾಡಳಿತ ಸಹ ಅವೈಜ್ಞಾನಿಕ ಕಾಮಗಾರಿಗೆ ಅರಣ್ಯನಾಶ ತಡೆಗಟ್ಟುವ ಕುರಿತು ಅಧ್ಯಯನ ನಡೆಸುತ್ತಿದ್ದು, ಭೂಕುಸಿತವಾದ ಸ್ಥಳಗಳಲ್ಲಿ ಜನರನ್ನು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತಿದೆ. ಇನ್ನೂ ಕರಾವಳಿ ಭಾಗದಲ್ಲಿ ಚತುಷ್ಪತ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಗುಡ್ಡಗಳನ್ನು ಬೇಕಾ ಬಿಟ್ಟಿಯಾಗಿ ಕೊರೆಯಲಾಗಿದೆ. ಹೀಗಾಗಿ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಗೆ ನೋಟಿಸ್ ಸಹ ನೀಡಲಾಗಿದೆ.