ಉಡುಪಿ: ನಾಯಿಮರಿಯನ್ನು ಬರ್ಬರವಾಗಿ ಹೊಡೆದು ಕೊಂದ ಕಾಲೇಜ್ ವಾರ್ಡನ್!
ಉಡುಪಿ (ಜ.28) : ಕಳೆದ ಎರಡು ತಿಂಗಳಿನಿಂದ ಆ ಮುದ್ದು ನಾಯಿಮರಿ ಎಲ್ಲರ ಪ್ರೀತಿಗಳಿಸಿತ್ತು. ಕಾಲೇಜಿನ ಕ್ಯಾಂಪಸ್ ನಲ್ಲೆಲ್ಲ ಓಡಾಡಿ ನೂರಾರು ವಿದ್ಯಾರ್ಥಿಗಳ ಅಕ್ಕರೆ ಗಳಿಸಿತ್ತು. ಆದ್ರೆ ವರಾಂಡದಲ್ಲಿ ಓಡಾಡುತ್ತಿರೋದು ಆಡಳಿತ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಮಾನವೀಯತೆ ಮರೆತ ವಾರ್ಡನ್ ಮಾಡಬಾರದ ಹೇಯ ಕೃತ್ಯ ಮಾಡಿ ಕೇಸು ಹಾಕಿಸಿಕೊಂಡಿದ್ದಾನೆ.
ಅದು ಉಡುಪಿಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿದ್ಯಾಲಯ. ಆದರೆ ಮಾನವೀಯತೆ ಕಲಿಸದೆ ಶಿಕ್ಷಣ ಪಡೆದು ಏನು ಪ್ರಯೋಜನ ಎಂದು ಕೇಳುವಂತಾಗಿದೆ.. ಮೂಕ ನಾಯಿಮರಿಯನ್ನು ಹೊಡೆದು ಕೊಂದ ವಿಡಿಯೋ ಒಂದು ಈ ಕಾಲೇಜು ಆವರಣದಿಂದ ಹೊರ ಬಿದ್ದಿದೆ. ಕಾಲೇಜಿನ ಹಾಸ್ಟೆಲ್ ವಾರ್ಡನ್ ಗಳಿಬ್ಬರು ದೊಣ್ಣೆಯಿಂದ ಪುಟ್ಟ ನಾಯಿಮರಿಯನ್ನು ಹೊಡೆದು ಹೊಡೆದು ಸಾಯಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳ ವೀಕ್ಷಕರನ್ನು ತಲ್ಲಣ ಗೊಳಿಸಿದೆ.
ಉಡುಪಿ(Udupi) ಜಿಲ್ಲೆ ಕಾಪು ತಾಲೂಕಿನ ಬಂಟ ಕಲ್ಲಿನಲ್ಲಿ ಶ್ರೀ ಮದ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜ್(Shri Madhwa Vadiraja College of Engineering) ಇದೆ. ಈ ಕಾಲೇಜಿನಲ್ಲಿ ಒಂದು ಹಾಸ್ಟೆಲ್ ಕೂಡ ಇದೆ. ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಬೀದಿ ನಾಯಿಯ ಜೊತೆ ಇಷ್ಟಪಟ್ಟು ಆಟವಾಡುತ್ತಿದ್ದಳು. ಹಾಸ್ಟೆಲ್ ಆವರಣದಲ್ಲಿ ನಾಯಿಯ ಓಡಾಟ ಅದ್ಯಾಕೋ ವಾರ್ಡನ್ ಗೆ ಸರಿ ಕಂಡು ಬರಲಿಲ್ಲ. ಅಷ್ಟು ಅಸಹನೆ ಇದ್ದಿದ್ದರೆ ಆ ನಾಯಿಯನ್ನು ಬೇರೆ ಸ್ಥಳಕ್ಕೆ ಬಿಟ್ಟು ಬರಬಹುದಿತ್ತು. ಆದರೆ ಆ ಕ್ರೂರ ವಾರ್ಡನ್ ಮಾಡಿದ್ದೇನು ಗೊತ್ತಾ?
ಹೌದು, ಪ್ರಾಣಿ ಪ್ರಿಯರು ಮಾತ್ರವಲ್ಲ ಮಾನವೀಯತೆ ಇದ್ದವರು ಯಾರೂ ಮಾಡಲಿಕ್ಕಿಲ್ಲ. ವಾರ್ಡನ್ ಗಳಿಬ್ವರು ಸೇರಿ ದೊಣ್ಣೆ ಬಳಸಿ ನಾಯಿಯನ್ನು ಹೊಡೆದು ಹೊಡೆದು ಕೊಂದುಹಾಕಿದ್ದಾರೆ. ಬಳಿಕ ಚೀಲದಲ್ಲಿ ನಾಯಿಯ ಕಳೆ ಬರವನ್ನು ತೆಗೆದುಕೊಂಡು ಎಸೆದಿದ್ದಾರೆ. ಈ ದುರಾದೃಷ್ಟಕರ ಘಟನೆಯಲ್ಲಿ ಇವರ ಈ ಕುಕೃತ್ಯ ವಿಡಿಯೋ ದಾಖಲೆ ಆಗಿದೆ ಅನ್ನೋದಷ್ಟೇ ನೆಮ್ಮದಿಯ ವಿಚಾರ.
ವಾರ್ಡನ್ ನಡೆಸಿದ ಈ ಅಮಾನುಷ ಕೃತ್ಯ ಕಾಲೇಜು ಅವರಣದಲ್ಲಿದ್ದ ಯಾವುದೋ ವಿದ್ಯಾರ್ಥಿ ಸೆರೆ ಹಿಡಿದಿದ್ದಾರೆ. ಸದ್ಯ ಆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಕ್ರಮೇಣ ಈ ವಿಷಯ ಪ್ರಾಣಿ ಪ್ರಿಯರ ಗಮನಕ್ಕೂ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ಸ್ಥಳೀಯ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ವಿಕೃತಿ ಮೆರೆದ ವಾರ್ಡನ್ ಅನ್ನು ರಾಜೇಶ್ ಎಂದು ಗುರುತಿಸಲಾಗಿದೆ. ನಾಗರಾಜ್ ಎಂಬಾರ ಈ ಕೃತ್ಯಕ್ಕೆ ಸಾತ್ ನೀಡಿದ್ದಾನೆ. ಮಂಜುಳಾ ಕರ್ಕೇರ ಶಿರ್ವ ಠಾಣೆಯಲ್ಲಿ ದೂರ ನೀಡಿದ್ದಾರೆ. ಉಡುಪಿಯ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಮುಖ್ಯಸ್ಥೆ ಬಬಿತಾ ಮಧ್ವರಾಜ್ ಇದನ್ನು ಒಂದು ಅಭಿಯಾನದ ರೀತಿಯಲ್ಲಿ ಮುಂದುವರಿಸಿದ್ದಾರೆ ಐಪಿಸಿ ಸೆಕ್ಷನ್ 428-29 ಮತ್ತು ಪಿಸಿಎ ಆಕ್ಟ್_11 ಪ್ರಕಾರ ದೂರು ದಾಖಲಾಗಿದೆ.
ಇದೊಂದು ಅಮಾನವೀಯ ಮತ್ತು ಕ್ರೂರ ಕೃತ್ಯ.ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ಆಗಬೇಕು.ಈ ನಾಯಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಒಂದು ಶಿಕ್ಷಣ ಸಂಸ್ಥೆ ಅದರಲ್ಲೂ ಮಠದವರು ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿ ಆಗಿರುವುದು ಖೇದಕರವೆನಿಸಿದೆ.