ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!
ಸ್ವಪ್ನಿಲ್ ಸಿಂಗ್, ಆರ್‌ಸಿಬಿ ತಂಡದ ಅದೃಷ್ಟದ ಹುಡುಗ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿದ ಸ್ವಪ್ನಿಲ್ ಸಿಂಗ್, ಈಗ ಆರ್‌ಸಿಬಿ ಅಭಿಮಾನಿಗಳ ನೆಚ್ಚಿನ ಆಟಗಾರ, ಮಾತ್ರವಲ್ಲ ಆತನೇ ಆರ್‌ಸಿಬಿ ಗೆಲ್ಲಲ್ಲು ಕಾರಣವಾಗುವ ಅದೃಷ್ಟದ ಆಟಗಾರ ಎನ್ನುವ ನಂಬಿಕೆ ಕೂಡ ಇದೆ. ₹20 ಲಕ್ಷ ರೂಪಾಯಿಗೆ ತಂಡಕ್ಕೆ ಬಂದ ಅವರು, ಈಗ ಬೆಲೆ ಕಟ್ಟಲಾಗದಷ್ಟು ಅಭಿಮಾನ ಸಂಪಾದನೆ ಮಾಡಿದ್ದಾರೆ.
ಆದರೆ ಸ್ವಪ್ನಿಲ್ ಸಿಂಗ್ ಅವರಿಗೆ ಎಲ್ಲವೂ ಅಂದುಕೊಂಡಷ್ಟು ಸುಲಭವಾಗಿ ದಕ್ಕಿದ್ದಲ್ಲ, ಅದರ ಹಿಂದೆ ಹೋರಾಟ ಇದೆ, ಸತತ ಪ್ರಯತ್ನವಿದೆ. ಎಲ್ಲವೂ ಮುಗಿಯಿತು ಅಂದುಕೊಂಡಾಗ ಆರ್‌ಸಿಬಿ ಕೈಹಿಡಿದಿದೆ, ಅವರು ಈಗ ಆರ್‌ಸಿಬಿ ಅದೃಷ್ಟ ಬದಲಿಸಿದ ಆಟಗಾರ. ಆತ ಆರ್ ಸಿಬಿ ಪರವಾಗಿ ಕಣಕ್ಕಿಳಿದಾಗಿನಿಂದ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಆರ್ ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸ್ವಪ್ನಿಲ್ ತಮ್ಮ ಕ್ರಿಕೆಟ್ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.
14 ವರ್ಷಕ್ಕೆ ಬರೋಡಾ ತಂಡಕ್ಕೆ ಆಡಿದ ಪ್ರತಿಭಾವಂತ ಹುಡುಗ ಈತ. ವಿರಾಟ್ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಕೂಡ ಹಂಚಿಕೊಂಡಿದ್ದರು. 2017-18ರ ರಣಜಿ ಪಂದ್ಯಾವಳಿಯಲ್ಲಿ ಸ್ವಪ್ನಿಲ್ ಸಿಂಗ್ ಆರು ಪಂದ್ಯಗಳಲ್ಲಿ 565 ರನ್ ಗಳಿಸಿದ್ದರು.
2014-15 ರ ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ, ಸ್ವಪ್ನಿಲ್ ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 19 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಸೌರಾಷ್ಟ್ರ ತಂಡಕ್ಕೆ ಆಘಾತ ನೀಡಿದ್ದರು. ಶೆಲ್ಡನ್ ಜಾಕ್ಸನ್ ಮತ್ತು ಭಾರತೀಯ ಅಂತಾರಾಷ್ಟ್ರೀಯ ಆಟಗಾರ ಚೇತೇಶ್ವರ ಪೂಜಾರ ಕೂಡ ಅವರ ವಿಕೆಟ್ ಪಟ್ಟಿಯಲ್ಲಿದ್ದರು. 2021-22 ದೇಶೀಯ ಋತುವಿನಲ್ಲಿ ಉತ್ತರಾಖಂಡ್ ಪರವಾಗಿ ಆಡುತ್ತಿದ್ದಾರೆ.
ಸ್ವಪ್ನಿಲ್ ಸಿಂಗ್ ಐಪಿಎಲ್ ಅನುಭವ
ಐಪಿಎಲ್‌ನಲ್ಲಿ ಸ್ವಪ್ನಿಲ್ ಸಿಂಗ್ ಮೊದಲು ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾಗಿದ್ದರು, ಆದರೆ ಒಂದೂ ಪಂದ್ಯವನ್ನು ಆಡುವ ಅವಕಾಶ ಅವರಿಗೆ ಸಿಕ್ಕಲಿಲ್ಲ. 2016ರ ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ₹10 ಲಕ್ಷಕ್ಕೆ ಅವರನ್ನು ಖರೀದಿ ಮಾಡಿತು. ಒಂದೇ ಒಂದು ಪಂದ್ಯವನ್ನು ಕೂಡ ಆಡಿದರು, ಎಂಎಸ್ ಧೋನಿ ಅವರು ಪಡೆದ ಮೊದಲ ಐಪಿಎಲ್ ವಿಕೆಟ್.
2023 ರ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾದರು. ಆದರೆ ರವಿ ಬಿಷ್ಣೋಯ್, ಕೃನಾಲ್ ಪಾಂಡ್ಯರಂತಹ ಸ್ಪಿನ್ನರ್ ಗಳು ತಂಡಲ್ಲಿದ್ದ ಕಾರಣ ಅವರಿಗೆ ಅವಕಾಶ ಸಿಗಲೇ ಇಲ್ಲ, ಆದರೆ ಕೋಚ್ ಆಂಡಿ ಫ್ಲವರ್ ಅವರ ಗಮನ ಸೆಳೆಯುವಲ್ಲಿ ಸ್ವಪ್ನಿಲ್ ಯಶಸ್ವಿಯಾಗಿದ್ದರು.
2024 ಐಪಿಎಲ್ ಹರಾಜಿಗೆ ಮುನ್ನ ಬೆಂಗಳೂರಿಗೆ ಬಂದಿದ್ದ ಸ್ವಪ್ನಿಲ್ ಸಿಂಗ್, ಟ್ರಯಲ್ಸ್ ನೀಡಿದ್ದರು. ಕೋಚ್ ಆಂಡಿ ಫ್ಲವರ್ ಬಳಿ ಕೊನೆಯ ಅವಕಾಶ ಕೊಡಿ ಎಂದು ಕೇಳಿದ್ದರು, ಸ್ವಪ್ನಿಲ್ ಬಗ್ಗೆ ಗೊತ್ತಿದ್ದ ಆಂಡಿ ಫ್ಲವರ್ ನೋಡೋಣ ಎಂದು ಹೇಳಿ ಕಳುಹಿಸಿದ್ದರು.
ಹರಾಜಿನ ದಿನ ಕಣ್ಣೀರು ಹಾಕಿದ್ದ ಸ್ವಪ್ನಿಲ್
“ಐಪಿಎಲ್ ಹರಾಜಿನ ದಿನ ನಾಣು ರಣಜಿ ಪಂದ್ಯವನ್ನಾಡಲು ಡೆಹ್ರಾಡೂನ್‌ಗೆ ಪ್ರಯಾಣಿಸುತ್ತಿದ್ದೆ, ರಾತ್ರಿ 7-8 ರ ಸುಮಾರಿಗೆ ಎಲ್ಲೋ ಬಂದು ಇಳಿದೆವು. ಕೊನೆಯ ಸುತ್ತಿನ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಅಲ್ಲಿವರೆಗೂ ಯಾವ ತಂಡವೂ ನನ್ನ ಬಗ್ಗ ಆಸಕ್ತಿ ತೋರಿಸಿರಲಿಲ್ಲ, ಎಲ್ಲವೂ ಮುಗಿಯಿತು, ಇನ್ನೊಂದು ವರ್ಷ ರಣಜಿ ಆಡಿ ಕ್ರಿಕೆಟ್‌ಗೆ ಗುಡ್‌ಬೈ ಹೇಳೋಣ ಎಂದು ನಿರ್ಧರಿಸಿದ್ದೆ. ಆದರೆ, ಅಷ್ಟರಲ್ಲೇ ನನಗೆ ಮನೆಯವರಿಂದ ಕರೆ ಬಂತು, ನಾನು ಆರ್ ಸಿಬಿಗೆ ಆಯ್ಕೆಯಾಗಿದ್ದೆ, ನನಗೆ ಅಳು ತಡೆದುಕೊಳ್ಳಲು ಆಗಲಿಲ್ಲ, ಅದೊಂದು ಭಾವನಾತ್ಮಕ ಪ್ರಯಾಣವಾಗಿತ್ತು ಎನ್ನುವುದು ಹಲವರಿಗೆ ತಿಳಿದಿಲ್ಲ” ಎಂದು ಭಾವುಕರಾದರು.
ಆರ್ ಸಿಬಿ ಅಭಿಮಾನಿಗಳ ಬಗ್ಗೆಯೂ ಮಾತನಾಡಿರುವ ಅವರು, ತಂಡ ಸತತವಾಗಿ ಸೋತಾಗ ಯಾರಿಗೆ ಆಗಲಿ ಬೇಸರವಾಗುತ್ತದೆ. ಆದರೆ ಆರ್ ಸಿಬಿ ಅಭಿಮಾನಿಗಳು ಸೋತಾಗಲೂ ನಮ್ಮ ಜೊತೆಯಿದ್ದರು, ಇಂತಹ ಅಭಿಮಾನಿಗಳನ್ನು ನಾನು ಎಲ್ಲಿಯೂ ನೋಡಿಲ್ಲ, ಎಲ್ಲರೂ ಲಾಯಲ್ ಫ್ಯಾನ್ಸ್ ಅನ್ನುತ್ತಾರೆ, ಅನುಭವಿಸಿದಾಗಲೇ ಅದು ಗೊತ್ತಾಗುತ್ತದೆ. ಸತತ ಸೋಲುಗಳ ನಡುವೆಯೂ ಅವರು ನಮ್ಮ ಜೊತೆ ಇದ್ದರು ಎಂದು ಹಾಡಿ ಹೊಗಳಿದ್ದಾರೆ.