ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಸಾವು
ಚಿಕ್ಕಬಳ್ಳಾಪುರ: ಶಾಲಾ ಶಿಕ್ಷಕರು (Teacher) ಮಾಡಿದ ಎಡವಟ್ಟಿಗೆ ಇಬ್ಬರು ವಿದ್ಯಾರ್ಥಿಗಳು (Student) ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bengaluru Rural) ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು ಬಾಗಲೂರು ಬಳಿಯ ರಜಾಕ್ ಪಾಳ್ಯದ ವಿದ್ಯಾರ್ಥಿ ಜುನೈದ್ (14), ಹಾಗೂ ಹೊಸಕೋಟೆ ತಾಲೂಕು ವಳಗೆರೆಪುರದ ವಿದ್ಯಾರ್ಥಿ ಸಂತೋಷ್ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿಗಳಿಬ್ಬರು ದೇವನಾಯಕನಹಳ್ಳಿ ಗ್ರಾಮದ ಬಳಿ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai School) 8ನೇ ತರಗತಿಯಲ್ಲಿ ಓದುತ್ತಿದ್ದರು.
ವಸತಿ ಶಾಲೆಯಲ್ಲಿದ್ದ 188 ವಿದ್ಯಾರ್ಥಿಗಳಲ್ಲಿ 98 ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು. ಉಳಿದ 94 ವಿದ್ಯಾರ್ಥಿಗಳಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಲೆಯ ಪ್ರಭಾರ ಜವಾಬ್ದಾರಿ ವಹಿಸಿಕೊಂಡಿದ್ದ ಕಂಪ್ಯೂಟರ್ ಶಿಕ್ಷಕಿ ರಶ್ಮಿ, ವೀಣಾ, ಕಾವಲುಗಾರ ಪ್ರಸನ್ನ ಪಿಕ್ನಿಕ್ ವಾಕಿಂಗ್ ಅಂತ ಶಾಲೆಯ ಹಿಂಭಾಗದ ಕುಂಟೆ ಕಡೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ 5 ಮಂದಿ ವಿದ್ಯಾರ್ಥಿಗಳು ಕುಂಟೆಯಲ್ಲಿ ಈಜಾಡಲು ಧುಮುಕಿದ್ದು, ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದು ಉಳಿದ ಮೂವರು ಆಸ್ಪತ್ರೆ (Hospital) ಸೇರಿದ್ದಾರೆ. ಶ್ರೇಯಸ್ ಎಂಬ ವಿದ್ಯಾರ್ಥಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಅಬ್ದುಲ್ ಅಮೀದ್, ಹಾಗೂ ಸುಹೇಲ್ ಖಾನ್ ಎಂಬ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಘಟನೆಯಲ್ಲಿ ಜುನೈದ್ ಹಾಗೂ ಸಂತೋಷ್ ಸಾವನ್ನಪ್ಪಿದ್ದು, ಮೃತರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಅಲ್ಪಸಂಖ್ಯಾತರ ಇಲಾಖೆಯ ಜಂಟಿನಿರ್ದೇಶಕ ಸಾಬೀರ್ ಮುಲ್ಲಾ ಸೇರಿದಂತೆ ತಹಶೀಲ್ದಾರ್ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನೆಗೆ ಕಾರಣೀಕರ್ತರಾದ ಶಿಕ್ಷಕಿಯರಾದ ರಶ್ಮಿ ಹಾಗೂ ವೀಣಾ, ಸೇರಿದಂತೆ ಕಾವಲುಗಾರ ಪ್ರಸನ್ನ ಹಾಗೂ ಮುಖ್ಯ ಶಿಕ್ಷಕ ಶಿವಮೂರ್ತಿ ವಿರುದ್ಧ ಚನ್ನರಾಯಪಟ್ಟಣ ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗಿದೆ.