ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯ, ಆರೋಪಿಯ ಬಂಧನ
ಜಮಖಂಡಿ(ಬಾಗಲಕೋಟೆ)(ಜ.24): ಅನುದಾನಿತ ಶಾಲೆಯೊಂದರ ಶಿಕ್ಷಕ ಅಪ್ರಾಪ್ತ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಸಾವಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅನುದಾನಿತ ಶಾಲೆಯೊಂದರ ಶಿಕ್ಷಕ ಲಕ್ಷ್ಮಣ ದೇವೆಂದ್ರಪ್ಪ ಕೊಪ್ಪದ ಬಂಧಿತ ಆರೋಪಿ. ಆರೋಪಿ ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಲುವೆ ಯಲ್ಲಾಪೂರ ಗ್ರಾಮದವನು. ಕಳೆದೊಂದು ವರ್ಷದಿಂದ ತನ್ನ ಮನೆಯಲ್ಲಿ ಇಂಗ್ಲಿಷ್ ಟ್ಯೂಷನ್ ಹೇಳಿಕೊಡುವುದಾಗಿ ಕರೆಸಿಕೊಂಡು ಟ್ಯೂಷನ್ ಬಿಟ್ಟ ನಂತರ ಮನೆಯಲ್ಲಿ ಪತ್ನಿ ಇಲ್ಲದ ವೇಳೆ ಹಾಗೂ ಶಾಲೆ ಬಿಟ್ಟ ನಂತರ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಇಬ್ಬರು ವಿದ್ಯಾರ್ಥಿನಿಯರು ಪಾಲಕರಿಗೆ ಮಾಹಿತಿ ನೀಡಿದ್ದರು.
ಹಲವು ದಿನಗಳಿಂದ ಪ್ರತಿನಿತ್ಯ ಶಿಕ್ಷಕ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯರು ಪಾಲಕರಿಗೆ ಈ ವಿಷಯ ತಿಳಿಸಿದ್ದರು. ಆರೋಪಿ ಲಕ್ಷ್ಮಣ ದೇವೇಂದ್ರಪ್ಪ 12 ವರ್ಷದಿಂದ ಸಾವಳಗಿಯಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದ. ಈ ಕುರಿತು ಸಾವಳಗಿ ಠಾಣೆಯಲ್ಲಿ ಪೋಕ್ಸೊ ಕಾಯ್ಡೆಯಡಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಸಾವಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.