ಇದೇ ಮೊದಲ ಬಾರಿಗೆ ಭಾರತೀಯ ಸಿಖ್ ಮಹಿಳೆಗೆ ಅಮೆರಿಕದಲ್ಲಿ ಜಡ್ಜ್ ಹುದ್ದೆ
ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಭಾರತೀಯರ (Indians) ಅಮೋಘ ಸಾಧನೆಗಳಿಗೆ ಪಾರವೇ ಇಲ್ಲದಂತಾಗಿದೆ. ವಿದೇಶಗಳಲ್ಲಿ ಭಾರತದ (India) ಕೀರ್ತಿ ಪತಾಕೆ ಹಾರಿಸುತ್ತಾ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ಬೀಡಿ ಕಟ್ಟುವ ಕೆಲಸ ಹಾಗೂ ಮನೆಗೆಲಸ ಮಾಡಿಕೊಂಡಿದ್ದ ಸುರೇಂದ್ರನ್ ಕೆ. ಪಾಟೀಲ್ (Surendran K Pattel) ಅಮೆರಿಕದ ಟೆಕ್ಸಾಸ್‌ನಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಭಾರತೀಯ ಮೂಲದ ಸಿಖ್ ಮಹಿಳೆ ಮನ್‌ಪ್ರೀತ್ ಮೋನಿಕಾ ಸಿಂಗ್ (Manpreet Monica Singh) ಯುಎಸ್‌ನ (US) ಹ್ಯಾರಿಸ್‌ಕೌಂಟಿ ಸಿವಿಲ್ ಕೋರ್ಟ್ (Harris County Civil Court) ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹೌದು. 1970ರಲ್ಲಿ ಮೋನಿಕಾ ಸಿಂಗ್ ಅವರ ಪೋಷಕರು ಯುಎಸ್‌ಗೆ (US) ವಲಸೆ ಬಂದು, ಹೂಸ್ಟನ್‌ನಲ್ಲಿ ನೆಲೆಸಿದ್ದರು. ಹಾಗಾಗಿ ಮೋನಿಕಾ ಸಿಂಗ್ ಹುಟ್ಟಿನಿಂದ ಯುಎಸ್‌ನಲ್ಲೇ ಬೆಳೆದರು. ಈಗ ಅವರಿಗೆ ಪತಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಕಳೆದ 20 ವರ್ಷಗಳಿಂದ ವಿಚಾರಣಾ ವಕೀಲರಾಗಿದ್ದ ಮೋನಿಕಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವು ನಾಗರಿಕ ಹಕ್ಕುಗಳ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದರು. ಇದೀಗ ಅವರು ಹ್ಯಾರಿಸ್ ಕೌಂಟಿ ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಕ್ಷಿಣ ಏಷ್ಯಾದ ನ್ಯಾಯಾಧೀಶರಾದ ಭಾರತೀಯ-ಅಮೆರಿಕನ್ ನ್ಯಾಯಾಧೀಶ ರವಿ ಸ್ಯಾಂಡಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಮಾತನಾಡಿದ ಮೋನಿಕಾ ಸಿಂಗ್, ಇದು ನನಗೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ನಾನು ಹೂಸ್ಟನ್ ಟೌನ್‌ನಿಂದ ಪ್ರತಿನಿಧಿಸಿದ್ದೆ. ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಯುಎಸ್ ನಲ್ಲಿ ಅಂದಾಜು 5 ಲಕ್ಷ ಸಿಖ್ಖರಿದ್ದಾರೆ. ಅದರಲ್ಲಿ 20 ಸಾವಿರ ಮಂದಿ ಹೂಸ್ಟನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.