ಇಂದು ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿರಾಯಾಸವಾಗಿ ಬಿಡುಗಡೆ ಮಾಡಿ ಗೆದ್ದಿದ್ದ ಕಾಂಗ್ರೆಸ್‌ಗೆ (Congress) ಉಳಿದಿರುವ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿತ್ತು. ಕಳೆದ ಎರಡು ದಿನಗಳಲ್ಲಿ ದೆಹಲಿಯಲ್ಲೇ ಬೀಡುಬಿಟ್ಟು ಮ್ಯಾರಥಾನ್ ಸಭೆ ನಡೆಸಿದ್ದಾರೆ. ಅಂತಿಮವಾಗಿ 100ರ ಪೈಕಿ 45ರಿಂದ 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದ್ದು, ಇಂದು(ಏಪ್ರಿಲ್ 06) ಬೆಳಗ್ಗೆ 11 ಗಂಟೆಯೊಳಗೆ ಕೈ ಅಭ್ಯರ್ಥಿಗಳ 2 ಪಟ್ಟಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಬಾಕಿ ಉಳಿದಿರುವ 100 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸಲು ಬುಧವಾರ ಇಡೀ ದಿನ ನಡೆದ ಕಸರತ್ತಿನ ನಂತರ ಸುಮಾರು 50 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಿದ್ದು, ಈ ಪಟ್ಟಿಯಲ್ಲಿ ಸಿದ್ದರಾಮಯ್ಯನವರ ಎರಡನೇ ಕ್ಷೇತ್ರ ಇರುತ್ತಾ? ಎನ್ನುವುದು ಕುತೂಹಲ ಮೂಡಿಸಿದೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಡಿ.ಕೆ.ಶಿವಕುಮಾರ್, ಸೂರ್ಯ ಉದಯವಾಗುವ ತನಕ ಕಾಯಿರಿ ಎಂದು ಹೇಳಿದ್ದಾರೆ. ಅಂದ್ರೆ ಇಂದು ಬೆಳಗ್ಗೆ ಕಾಂಗ್ರೆಸ್ ಟಿಕೆಟ್ ಬಿಡುಗಡೆಯಾಗುವ ಸೂಚನೆಯನ್ನು ಡಿಕೆಶಿ ಕೊಟ್ಟಿದ್ದಾರೆ. ಡಿಕೆಶಿ ಬಳಿಕ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಇಂದು ಬೆಳಗ್ಗೆ 11 ಗಂಟೆಯೊಳಗೆ ಟಿಕೆಟ್ ರಿಲೀಸ್ ಆಗಲಿದೆ ಎಂದಿದ್ದಾರೆ.
ಬಾಕಿ ಉಳಿದಿರುವುದರಲ್ಲಿ ಶೇ.50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಎರಡಕ್ಕಿಂತ ಹೆಚ್ಚು ಹೆಸರುಗಳು ಚುನಾವಣಾ ಸಮಿತಿ ಸಭೆ ಮುಂದೆ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಮಂಗಳವಾರವೇ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಗರಂ ಆಗಿದ್ದರು. ಒಂದು ಅಥವಾ ಎರಡು ಹೆಸರುಗಳಿರುವ ಪಟ್ಟಿಯನ್ನಷ್ಟೇ ಚುನಾವಣಾ ಸಮಿತಿ ಮುಂದೆ ತನ್ನಿ ಎಂದು ಖಡಕ್ ಸೂಚನೆ ನೀಡಿದ್ದರು. ಅದರಂತೆ ಮತ್ತೊಮ್ಮೆ ಸಭೆ ಸೇರಿದ ಸ್ಕ್ರೀನಿಂಗ್ ಕಮಿಟಿಯು ಎರಡಕ್ಕಿಂತ ಹೆಚ್ಚು ಹೆಸರುಗಳಿರುವ ಕ್ಷೇತ್ರಗಳಲ್ಲಿ ಸಂಭಾವ್ಯರ ಸಂಖ್ಯೆಯನ್ನು ಎರಡಕ್ಕಿಳಿಸುವ ಕಾರ್ಯವನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಪೂರ್ಣಗೊಳಿಸಿದೆ.
ಆ ಬಳಿಕ ಕಾಂಗ್ರೆಸ್ ಚುನಾವಣಾ ಸಮಿತಿಯು ಸಂಜೆ 4.30ರಿಂದ ಸುಮಾರು 2 ಗಂಟೆಗಳ ಕಾಲ ಎರಡನೇ ಪಟ್ಟಿಕುರಿತು ಚರ್ಚೆ ನಡೆಸಿದೆ. ಸದ್ಯಕ್ಕೆ ಸಭೆ ಅಪೂರ್ಣಗೊಂಡಿದ್ದು, ಗುರುವಾರ ಮಧ್ಯಾಹ್ನ 2.30 ವೇಳೆಗೆ ಮತ್ತೆ ಸಮಿತಿ ಸಭೆ ಸೇರಲಿದೆ. ಈ ಸಭೆಯಲ್ಲಿ ತೀವ್ರ ಗೊಂದಲ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದೆ. ಮೂಲಗಳ ಪ್ರಕಾರ ಎರಡನೇ ಪಟ್ಟಿಗುರುವಾರ ಬಿಡುಗಡೆಯಾದರೂ ಅನಂತರದ ಪಟ್ಟಿಯೇನಿದ್ದರೂ ಬಿಜೆಪಿಯ ಪಟ್ಟಿ ಪ್ರಕಟವಾದ ನಂತರವೇ ಬಿಡುಗಡೆ ಮಾಡಲು ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಯಾಕಂದ್ರೆ, ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿದ್ದು, ಅವರಿಗಾಗಿ ಟಿಕೆಟ್ ಕಾಯ್ದಿರಿಸಿದೆ ಎಂದು ತಿಳಿದುಬಂದಿದೆ.