ಇಂದಿನಿಂದ ಹೈವೋಲ್ಟೇಜ್ ಏಕದಿನ ಸರಣಿ – ಟೀಂ ಇಂಡಿಯಾ ವಿಶ್ವಕಪ್ ಅಭಿಯಾನ ಶುರು
ದಿಸ್ಪುರ್: ಶ್ರೀಲಂಕಾ (SriLanka) ವಿರುದ್ಧದ ಟಿ20 ಸರಣಿಯನ್ನು (T20 Series) 2-1 ಅಂತರದಿಂದ ಗೆದ್ದು ಬೀಗಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಗಾಗಿ ಸಜ್ಜಾಗಿದ್ದು, ಜನವರಿ 10 ರಿಂದ ಮೂರು ಪಂದ್ಯಗಳ ಈ ಸರಣಿ ಆರಂಭವಾಗಲಿದೆ.
ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಭಾರತ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma), ಕೆ.ಎಲ್ ರಾಹುಲ್ (KL Rahul) ಸರಣಿಯ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಆದರೆ ಗಾಯಾಳುವಾಗಿದ್ದ ಟೀಂ ಇಂಡಿಯಾ (Team India) ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಲಂಕಾ ಏಕದಿನ ಸರಣಿಯಿಂದಲೂ ಹೊರಗಿಡಲಾಗಿದೆ. ಅಲ್ಲದೇ ಮುಂದೆ ನಡೆಯುವ ಆಸ್ಟ್ರೇಲಿಯಾ ಸರಣಿಯಿಂದಲೂ ಔಟಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈ ಏಕದಿನ ಸರಣಿಯೊಂದಿಗೆ ಟೀಂ ಇಂಡಿಯಾದ ವಿಶ್ವಕಪ್ (ODI WorldCup) ಏಕದಿನದ ಅಭಿಯಾನ ಕೂಡ ಶುರುವಾಗಲಿದೆ. ಇದೇ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪೂರ್ವಭಾವಿಯಾಗಿ ಭಾರತ ತಂಡವು ಒಟ್ಟು 35 ಪಂದ್ಯಗಳನ್ನು ಆಡಲಿದೆ. ಇದರ ಮೊದಲ ಭಾಗವಾಗಿ ಇದೀಗ ಲಂಕಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಹೀಗಾಗಿಯೇ 2023ರ ಮೊದಲ ಏಕದಿನ ಸರಣಿಯು ಟೀಂ ಇಂಡಿಯಾ ಪಾಲಿಗೆ ಮಹತ್ವದೆನಿಸಿಕೊಂಡಿದೆ.
ರೋಹಿತ್ ಶರ್ಮಾ ಏಕದಿನ ಸರಣಿಯನ್ನು ಮುನ್ನಡೆಸಲಿದ್ದು, ಟಿ20 ಏಕದಿನ ನಾಯಕ ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತ ಹಿರಿಯ ಆಟಗಾರರ ಕಂಬ್ಯಾಕ್ ಹಿನ್ನೆಲೆಯಲ್ಲಿ ಟಿ20 ತಂಡದಲ್ಲಿದ್ದ ಕೆಲ ಆಟಗಾರರು ಏಕದಿನ ಸರಣಿಗೆ ಆಯ್ಕೆಯಾಗಿಲ್ಲ.
ಈ ಬಳಗದಲ್ಲಿ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ಕೆ.ಎಲ್ ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಹಾಗೂ ಅರ್ಷ್‌ದೀಪ್ ಸಿಂಗ್ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಈ ಏಕದಿನ ಸರಣಿ ಗೆಲವು ಕೂಡ ವಿಶ್ವಕಪ್ ಮೇಲೆ ಭಾರೀ ಪರಿಣಾಮ ಬೀರಲಿದ್ದು, ರೋಹಿತ್ ಪಡೆಗೆ ಕಠಿಣ ಪರೀಕ್ಷೆಯಾಗಿದೆ.
ಏಕದಿನ ಸರಣಿ ವೇಳಾಪಟ್ಟಿ:
- ಜನವರಿ 10: ಮೊದಲ ಏಕದಿನ ಪಂದ್ಯ (ಸ್ಥಳ- ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿ)
- ಜನವರಿ 12: 2ನೇ ಏಕದಿನ ಪಂದ್ಯ (ಸ್ಥಳ- ಈಡನ್ ಗಾರ್ಡನ್ಸ್, ಕೋಲ್ಕತ್ತಾ)
- ಜನವರಿ 15: 3ನೇ ಏಕದಿನ ಪಂದ್ಯ (ಗ್ರೀನ್‌ಫೀಲ್ಡ್ ಸ್ಟೇಡಿಯಂ, ತಿರುವನಂತಪುರಂ)