ಬೆಂಗಳೂರು: ಇಂದಿನಿಂದ ದೇಶಾದ್ಯಂತ ಮಕ್ಕಳಿಗೆ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದೆ. ಸಿಲಿಕಾನ್ ಸಿಟಿಯಲ್ಲೂ 15ರಿಂದ 18 ವರ್ಷದವರಿಗೆ ಲಸಿಕೆ ನೀಡಲು ಭರ್ಜರಿ ತಯಾರಿ ನಡೆದಿದೆ. ಬೆಂಗಳೂರಿನ ಮೂಡಲಪಾಳ್ಯದ ಭೈರವೇಶ್ವರಿನಗರದ ಬಿಬಿಎಂಪಿ ಕಾಲೇಜಿನಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆ 9:30ಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಅಂದಾಜು 45 ಲಕ್ಷ ಮಕ್ಕಳು ಕೋವಿಡ್ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದು. ಬೆಂಗಳೂರಿನಲ್ಲಿ 7 ಲಕ್ಷ ಮಕ್ಕಳನ್ನ ಬಿಬಿಎಂಪಿ ಗುರುತಿಸಿದೆ.
ಶಾಲೆ ಕಾಲೇಜುಗಳಲ್ಲೇ ಮಕ್ಕಳಿಗೆ ವ್ಯಾಕ್ಸಿನ್ ನೀಡಲು ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ ಪ್ರಸ್ತುತ 25 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದ್ದು, ನಾಳೆಯೊಳಗೆ 10ರಿಂದ 12 ಲಕ್ಷ ಡೋಸ್ ಲಸಿಕೆ ಕೇಂದ್ರದಿಂದ ಬರುವ ನಿರೀಕ್ಷೆ ಇದೆ. ಈ ಹಿಂದೆ ಕಾಲೇಜುಗಳಲ್ಲಿ ಲಸಿಕೆ ನೀಡಿದ ಮಾದರಿಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಲ್ಲಿ ವ್ಯಾಕ್ಸಿನ್ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಲಸಿಕಾ ಕೇಂದ್ರಗಳ ಬಳಿ 30 ನಿಮಿಷಗಳ ವಿಶ್ರಾಂತಿ ಪಡೆಯಲು ಸಹಕಾರಿಯಾಗುವಂತೆ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಲಸಿಕೆ ನೀಡುವ ಎಲ್ಲಾ ಶಾಲೆಗಳ ಬಳಿ ಆಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಇಂದಿನಿಂದ 15 ರಿಂದ 18 ವರ್ಷದವರಿಗೆ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದೆ. ಅಭಿಯಾನಕ್ಕೆ ಬೆಂಗಳೂರಿನ ಶಾಲೆ, ಕಾಲೇಜುಗಳು ಸಜ್ಜಾಗಿವೆ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಯಿಂದ ಸಿಕ್ಕ ಮಾರ್ಗಸೂಚಿಯಂತೆ ಲಸಿಕಾ ಕೇಂದ್ರಗಳು ಸಿದ್ಧತೆ ಮಾಡಿಕೊಂಡಿವೆ.
ಮೂಡಲಪಾಳ್ಯದ ಭೈರವೇಶ್ವರಿನಗರದ ಬಿಬಿಎಂಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ 9:30ಕ್ಕೆ ಸಿಎಂ ಬೊಮ್ಮಾಯಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ 15 ರಿಂದ 18 ವರ್ಷೊದಳಗಿನ ಒಟ್ಟು 7 ಲಕ್ಷ ಮಕ್ಕಳಿದ್ದಾರೆ. ಇವ್ರೆಲ್ಲರಿಗೂ ವ್ಯಾಕ್ಸಿನ್ ನೀಡಲು ಬಿಬಿಎಂಪಿ ಸಜ್ಜಾಗಿದೆ.
ಬೆಂಗಳೂರಲ್ಲಿ 5 ಸಾವಿರದ 400 ಶಾಲೆಗಳು, 577 ಪಿಯು ಕಾಲೇಜುಗಳಿವೆ. ಲಸಿಕೆ ನೀಡೋದಕ್ಕೆ ನೆರವಾಗಲಿ ಅಂತಾ ಬಿಬಿಎಂಪಿ ಇವನ್ನ ಡಿವೈಡ್ ಮಾಡಿಕೊಂಡಿದೆ. ಇಂದು 220 ಶಾಲೆಗಳಲ್ಲಿ ಲಸಿಕೆ ಕಾರ್ಯಕ್ರಮ ನಡೆಯಲಿದೆ. ದಿನಕ್ಕೆ 50 ಸಾವಿರ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಪ್ರತಿ ದಿನ ಒಂದು ಶಾಲೆ ಆಯ್ಕೆ ಮಾಡಿ ಲಸಿಕೆ ನೀಡಲು ಪ್ಲ್ಯಾನ್ ಮಾಡಲಾಗಿದೆ. ಲಸಿಕಾ ಕೇಂದ್ರದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಇರಲಿದೆ. ಒಂದ್ವೇಳೆ ವಿದ್ಯಾರ್ಥಿಗೆ ಕೈ ನೋವು, ಸುಸ್ತು ಜ್ವರ ಕಾಣಿಸಿಕೊಂಡ್ರೆ ರಜೆ ನೀಡುವಂತೆ ಸೂಚಿಸಲಾಗಿದೆ.
ಇನ್ನು ರಾಜ್ಯದ ವಿವಿಧ ಜಿಲ್ಲೆಗಳೂ ಕೂಡ 15 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲು ಸಜ್ಜಾಗಿವೆ. ಧಾರವಾಡ ಜಿಲ್ಲೆಯಲ್ಲಿ 95,774 ಮಕ್ಕಳಿಗೆ ಲಸಿಕೆ ನೀಡಿದ್ರೆ, ಕಲಬುರಗಿ ಜಿಲ್ಲೆಯಲ್ಲಿ 1 ಲಕ್ಷದ 60 ಸಾವಿರ, ಬಾಗಲಕೋಟೆಯಲ್ಲಿ, 1 ಲಕ್ಷ 2 ಸಾವಿರ, ಬೀದರ್ 1,05,083, ತುಮಕೂರು, 1 ಲಕ್ಷದ 22 ಸಾವಿರ , ಬೆಳಗಾವಿ ಜಿಲ್ಲೆಯಲ್ಲಿ 3,01,828, ರಾಯಚೂರು 1,14,953, ಮೈಸೂರು 1,47,279, ಕೊಪ್ಪಳ 84, 516, ಬಳ್ಳಾರಿ-ವಿಜಯನಗರ 1,70344, ರಾಮನಗರ 48, 700, ಉಡುಪಿ 45, 600, ಚಿತ್ರದುರ್ಗ76,142, ಚಿಕ್ಕಮಗಳೂರು 48,707, ಶಿವಮೊಗ್ಗದಲ್ಲಿ 83,831, ಹಾವೇರಿಯಲ್ಲಿ 77,677,ಯಾದಗಿರಿ ಜಿಲ್ಲೆಯಲ್ಲಿ 74,953, ಬೆಂಗಳೂರು ಗ್ರಾ. ಜಿಲ್ಲೆ 48,865, ಗದಗದಲ್ಲಿ 55,880 ಹಾಗೂ ವಿಜಯನಗರ ಜಿಲ್ಲೆಯಲ್ಲಿ 2,45,352 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತೆ.
2007ರ ನಂತ್ರ ಹುಟ್ಟಿದವರು ಇಂದಿನಿಂದ ಲಸಿಕೆ ಪಡೆದುಕೊಳ್ಳಬಹುದು. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ಡ್ರೈವ್ ನಡೆಯಲಿದ್ದು, ನೋಂದಣಿ ಮಾಡಿಕೊಂಡು ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ.
ದ.ಕ. 1.01 ಲಕ್ಷ – ಉಡುಪಿ 53,555 ಮಕ್ಕಳಿಗೆ ಗುರಿ
ದ.ಕ. ಜಿಲ್ಲೆಯಲ್ಲಿ ಒಟ್ಟು, 1,01,549 ಮತ್ತು ಉಡುಪಿ ಜಿಲ್ಲೆಯಲ್ಲಿ 53,555 ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಶಾಲೆಯಿಂದ ಹೊರಗುಳಿದ 15ರಿಂದ 18 ವಯಸ್ಸಿನವರನ್ನು ಪಿಡಿಒ ಮೂಲಕ ಪತ್ತೆ ಹಚ್ಚಲು ನಿರ್ಧರಿಸಲಾಗಿದ್ದು ಇವರಿಗೆ ಹತ್ತಿರದ ಪ್ರಾಥಮಿಕ ಕೇಂದ್ರಗಳಲ್ಲಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಕ್ರಮ ವಹಿಸಿದೆ.
ಜಿಲ್ಲೆಯಲ್ಲಿ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಹಾಗೂ ಇತರ ಶಿಕ್ಷಣ ಸಂಸ್ಥೆಗಳಲ್ಲಿ 15 ವಯಸ್ಸಿಗಿಂತ ಮೇಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆಯನ್ನು ಈಗಾಗಲೇ ಆರೋಗ್ಯ ಇಲಾಖೆ ಸಂಗ್ರಹಿಸಿದ್ದು ಲಸಿಕೆ ನೀಡಲು ಸರ್ವಸಿದ್ಧತೆಗಳನ್ನು ಮಾಡಲಾಗಿದೆ. ಸೋಮವಾರ ಬೆಳಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬಂದಿ ಕೇಂದ್ರಗಳ ವ್ಯಾಪ್ತಿಯ ಶಾಲೆ, ಕಾಲೇಜುಗಳಿಗೆ ತೆರಳಿ ಲಸಿಕೆ ನೀಡಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ.