ಇಂದಿನಿಂದಲೇ ಐದು ಗ್ಯಾರಂಟಿಗಳು ಜಾರಿ: ನೂತನ ಸಿಎಂ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ನಾವು ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಇಂದಿನಿಂದಲೇ ಜಾರಿ ಮಾಡುತ್ತೇವೆ ಎಂದು ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಕಂಠೀರವ ಮೈದಾನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಎಲ್ಲಾ ಐದು ಯೋಜನೆಗಳಿಗೆ ಅನುಮತಿ ನೀಡಿ ಜಾರಿಗೆ ತರುತ್ತೇವೆ. ನುಡಿದಂತೆ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಭಾರತ ಜೋಡೊ ಯಾತ್ರೆಯ ಮೂಲಕ ಪ್ರಚಾರ ಆರಂಭವಾಯ್ತು. ರಾಷ್ಟ್ರೀಯ ನಾಯಕರು ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. ಸಾಹಿತಿಗಳೂ ಚಿಂತಕರು, ಸಂಘಟನೆಗಳ ನಾಯಕರು ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದರು.
ಸಿಎಂ, ಡಿಸಿಎಂ ಜೊತೆ 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ:
ಬೆಂಗಳೂರು: ಸಿದ್ದರಾಮಯ್ಯ ಸಂಪುಟ ದರ್ಜೆ ಸಚಿವರಾಗಿ 8 ಮಂದಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಸಂಪುಟ ದರ್ಜೆ ಸಚಿವರಾಗಿ ಪರಮೇಶ್ವರ್, ಪ್ರಿಯಾಂಕ ಖರ್ಗೆ, ಜಮೀರ್ ಅಹಮದ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಇವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದರು. ಆದರೆ ಇವರುಗಳಿಗೆ ಖಾತೆ ಹಂಚಿಕೆ ಮಾಡಿಲ್ಲ. ಇದಕ್ಕೂ ಮೊದಲು ಸಿದ್ದರಾಮಯ್ಯ ಅವರು ಸಿಎಂ ಆಗಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಸಮಾರಂಭದಲ್ಲಿ ಪ್ರಮುಖವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ತಮಿಳುನಾಡು ಸಿಎಂ ಸ್ಟಾಲಿನ್, ನಟ ಕಮಲ್ ಹಾಸನ್, ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಜೇಂದ್ರ ಸಿಂಗ್ ಬಾಬು, ದುನಿಯಾ ವಿಜಯ್, ನಟಿ ರಮ್ಯಾ, ಭಾವನಾ, ಉಮಾಶ್ರೀ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಸಂಭ್ರಮಾಚರಣೆ:
ಮಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಲ್ಲಿಕಟ್ಟೆ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ತಿಂಡಿ ಹಂಚಿ ಸಂಭ್ರಮಿಸಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಕೊಡಿಜಾಲ್, ಮ.ನ.ಪಾ. ವಿಪಕ್ಷ ನಾಯಕ ನವೀನ್ ಡಿ ಸೋಜಾ, ಮಾಜಿ ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಾಹುಲ್ ಹಮೀದ್ ಕೆ.ಕೆ., ರಮಾನಂದ ಪೂಜಾರಿ, ಶುಭೋದಯ ಆಳ್ವಾ,ನಿರಾಜ್ ಪಾಲ್, ವಿಶ್ವಾಸ್ ಕುಮಾರ್ ದಾಸ್, ಗಣೇಶ್ ಪೂಜಾರಿ, ಸಬಿತಾ ಮಿಸ್ಕಿತ್, ರಹಿಮಾನ್ ಕೊಡಿಜಾಲ್, ವಿಕಾಸ್ ಶೆಟ್ಟಿ, ಮುಹಮ್ಮದ್ ಬಪ್ಪಲಿಗ, ಮಂಜುಳಾ ನಾಯಕ್, ಸರೀಫ್ ಚೊಕ್ಕಬೆಟ್ಟು, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಹನೀಫ್ ಬೆಂಗ್ರೆ, ಪ್ರಶಾಂತ್ ಪೂಜಾರಿ, ಯೋಗೀಶ್ ಕುಮಾರ್, ಸಮರ್ಥ್ ಭಟ್, ಭುವನ್ ಕರ್ಕೇರ, ಇಮ್ರಾನ್ ಎ ಆರ್, ಟಿ ಕೆ ಸುಧೀರ್, ಯಶವಂತ್ ಪ್ರಭು, ಹನೀಫ್ ಸೋಲಾರ್, ಯೋಗೀಶ್ ಕುಮಾರ್, ನಝೀರ್ ಬಜಾಲ್ ಮೊದಲದವರು ಉಪಸ್ಥಿತರಿದ್ದರು.