ಇಂಡಿಯ ಕೂಟಕ್ಕೆ ಕೈ ಜೋಡಿಸುತ್ತಾರಾ ನಿತೀಶ್ ಕುಮಾರ್..? ಪ್ರಧಾನಿ ಸ್ಥಾನಕ್ಕೆ ಪೈಪೋಟಿ..!
ಹೊಸದಿಲ್ಲಿ: ಲೋಕಸಭೆ ಚುನಾವಣೆ ಫಲಿತಾಂಶ (Election Results 2024) ಬಂದ ಬಳಿಕ ಎನ್‌ಡಿಎ (NDA) ಮೈತ್ರಿಪಕ್ಷಗಳನ್ನು ಸೇರಿಸಿಕೊಂಡು ಕೇಂದ್ರ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಇರುವಾಗಲೇ, ಬಿಜೆಪಿಗೆ (BJP) ಬೆವರು ಕಿತ್ತುಕೊಳ್ಳುವಂಥ ಕೆಲವು ಬೆಳವಣಿಗೆ ನಡೆದಿವೆ. ನಿತೀಶ್ ಕುಮಾರ್ (Nitish Kumar) ಅವರ ಜೆಡಿಯು (JDU) ಪಕ್ಷದ ಸಂಸದನೊಬ್ಬ, “ಪ್ರಧಾನಿ (Prime Minister) ಸ್ಥಾನಕ್ಕೆ ನಿತೀಶ್‌ಗಿಂತ ಅರ್ಹತೆ ಇರುವವರು ಬೇರೆ ಯಾರು?” ಎಂದು ಬಾಂಬ್ ಸಿಡಿಸಿದ್ದಾರೆ. ಹಾಗೆಯೇ ಜೆಡಿಯು ಎಕ್ಸ್‌ನಲ್ಲಿ ಮಾಡಿರುವ ಒಂದು ಪೋಸ್ಟ್‌ನಲ್ಲಿ ಇಂಡಿಯಾ ಬಣದ (INDIA Bloc) ಕಡೆಗೆ ಒಲವು ಹೊಂದಿರುವ ಸುಳಿವು ನೀಡಿದೆ.
ಬಿಹಾರದ ಜೆಡಿಯು ಸಂಸದ ಡಾ. ಖಾಲಿದ್ ಅನ್ವರ್ ಎಂಬವರು ನಿತೀಶ್ ಕುಮಾರ್ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. “ನಿತೀಶ್ ಕುಮಾರ್‌ಗಿಂತ ಉತ್ತಮ ಪ್ರಧಾನಿ ಆಗಬಲ್ಲವರು ಯಾರು?
ನಿತೀಶ್ ಕುಮಾರ್ ಅವರು ಒಬ್ಬ ಅನುಭವಿ ರಾಜಕಾರಣಿ. ಸಮಾಜ ಮತ್ತು ದೇಶವನ್ನು ಅರ್ಥ ಮಾಡಿಕೊಂಡಿದ್ದಾರೆ. ಮತ್ತು ಅವರು ಎಲ್ಲರನ್ನೂ ಗೌರವಿಸುತ್ತಾರೆ. ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಗೌರವಿಸುತ್ತಾರೆ. ನಾವು ಸದ್ಯಕ್ಕೆ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದೇವೆ. ಆದರೆ ಈ ಮೊದಲು ಮತ್ತು ಇಂದೂ ಜನರು ನಿತೀಶ್ ಕುಮಾರ್ ಅವರನ್ನು ಪ್ರಧಾನಿಯಾಗಲು ಬಯಸಿದ್ದಾರೆ. ಇಂದಿನ ಫಲಿತಾಂಶದ ಬಳಿಕ ಜನರ ನಿರೀಕ್ಷೆ ಹೆಚ್ಚಿದೆ” ಎಂದು ಹೇಳಿದ್ದಾರೆ.
“ನಿತೀಶ್ ಅವರು ಬಿಹಾರ ರಾಜ್ಯವನ್ನು ಮುಂದಕ್ಕೆ ಕೊಂಡೊಯ್ದ ರೀತಿ, ಅವರು ಕೃಷಿ ಸಚಿವರಾಗಿದ್ದಾಗ ದೇಶಕ್ಕಾಗಿ ರೂಪಿಸಿದ ಮಾರ್ಗಸೂಚಿಯನ್ನು, ಅವರು ರೈಲ್ವೇ ಕ್ಷೇತ್ರಕ್ಕಾಗಿ ಮಾಡಿದ ಕಾರ್ಯವನ್ನು ಸಹ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ” ಎಂದಿದ್ದಾರೆ ಅನ್ವರ್.
ಈ ಮಾತುಗಳು ಎನ್‌ಡಿಎ ಸರ್ಕಾರದಲ್ಲಿ ನಿತೀಶ್ ಭಾಗವಹಿಸುವಿಕೆಯ ಕುರಿತು ಸಂಶಯ ಮೂಡಿಸಿವೆ. ನಿತೀಶ್ ಕುಮಾರ್ ಪ್ರಧಾನ ಮಂತ್ರಿಯಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಅದನ್ನು ತಮ್ಮ ಸಂಸದರ ಮೂಲಕ ಹೇಳಿಸಿದರೇ ಎಂಬ ಜಿಜ್ಞಾಸೆ ಮೂಡಿದೆ. ಅಥವಾ, ಎನ್‌ಡಿಎ ಹಾಗೂ ಇಂಡಿ ಒಕ್ಕೂಟಗಳಲ್ಲಿ ಪ್ರಧಾನಿ ಪದವಿಯನ್ನು ತಮಗೆ ಯಾರು ನೀಡುತ್ತಾರೋ ಅವರ ಜೊತೆ ಹೋಗಲು ಸಿದ್ಧ ಎಂಬ ಸಂದೇಶವನ್ನು ನಿತೀಶ್ ರವಾನಿಸಿದರೇ ಎಂಬ ಅನುಮಾನವೂ ಮೂಡಿದೆ.
ಜನತಾ ದಳ (ಸಂಯುಕ್ತ) ಬಿಹಾರದಲ್ಲಿ 14 ಸ್ಥಾನಗಳಲ್ಲಿ ಮುಂದಿದೆ ಬಿಜೆಪಿ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟು 40 ಲೋಕಸಭಾ ಕ್ಷೇತ್ರಗಳು ಇಲ್ಲಿವೆ. ಏತನ್ಮಧ್ಯೆ ಇಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಷ್ಟ್ರೀಯ ಜನತಾದಳ ಐದು ಸ್ಥಾನ, ಕಾಂಗ್ರೆಸ್ ಎರಡು ಸ್ಥಾನ, ಕಮ್ಯುನಿಸ್ಟ್ ಪಕ್ಷ 1 ಸ್ಥಾನ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) 1 ಸ್ಥಾನ ಗಳಿಸಿವೆ.
ಇನ್ನೊಂದು ಬೆಳವಣಿಗೆಯಲ್ಲಿ, ಜೆಡಿಯು ಪಕ್ಷದ ಅಧಿಕೃತ ಎಕ್ಸ್ ಖಾತೆಯಲ್ಲಿ ಹಾಕಲಾದ ಒಂದು ಪೋಸ್ಟ್, ಇನ್ನಷ್ಟು ಅಚ್ಚರಿ ಮೂಡಿಸಿದೆ. ಅದರಲ್ಲಿ, ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸಿರುವ ನಿತೀಶ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಪಕ್ಷ, “ನ್ಯಾಯ್ ಕೆ ಸಾಥ್ ವಿಕಾಸ್ ಕಾ ಸಂಕಲ್ಪ್ ಹೋ ರಹಾ ಪೂರಾ (ನ್ಯಾಯದೊಂದಿಗೆ ಅಭಿವೃದ್ಧಿಯ ನಿರ್ಣಯವನ್ನು ಈಡೇರಿಸಲಾಗುತ್ತಿದೆ)” ಎಂದು ಬರೆದಿದೆ. ನಿತೀಶ್ ಕುಮಾರ್ ಅವರು ಅಭಿವೃದ್ಧಿ ಕುರಿತು ಮಾತನಾಡಿರುವ ವಿಡಿಯೋವನ್ನು ಪಕ್ಷವು ಹಂಚಿಕೊಂಡಿದೆ. ವಿಡಿಯೋದಲ್ಲಿರುವ ಹಿನ್ನೆಲೆ ಸಂಗೀತ ರಜನಿಕಾಂತ್ ಅವರ ಜೈಲರ್ ಚಿತ್ರದ್ದು.
ಇಲ್ಲಿ ʼನ್ಯಾಯʼ ಎಂಬ ಪದ ಕಾಂಗ್ರೆಸ್‌ನ ಪ್ರಣಾಳಿಕೆಯೊಂದಿಗೆ ತಳುಕು ಹಾಕಿಕೊಂಡಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ʼನ್ಯಾಯಪತ್ರʼ ಎಂದು ಕರೆಯಲಾಗಿದೆ. ಆದರೆ, ʼವಿಕಾಸ್ʼ ಎಂಬ ಪದವು ಮೋದಿಯವರೊಂದಿಗೆ ತಳುಕು ಹಾಕಿಕೊಂಡಿದೆ. ಮೋದಿಯವರು ತಮ್ಮ ಭಾಷಣಗಳಲ್ಲಿ ಪದೇ ಪದೆ ಉಲ್ಲೇಖಿಸುವ ಸಂಗತಿಯೆಂದರೆ ʼಸಬ್ ಕಾ ಸಾಥ್ ಸಬ್ ಕಾ ವಿಕಾಸ್.ʼ ಹೀಗೆ ಎರಡೂ ಪದಗಳನ್ನು ಏಕಕಾಲಕ್ಕೆ ಬಳಸಿ, ಎರಡೂ ಒಕ್ಕೂಟಗಳ ಜೊತೆಗೆ ಹೋಗಲು ತಾನು ಸಿದ್ಧ ಎಂಬ ಸಂದೇಶವನ್ನು ಕೂಡ ನಿತೀಶ್ ರವಾನಿಸಿದ್ದಾರೆ ಎಂದು ತರ್ಕಿಸಲಾಗಿದೆ.
ಈ ಎರಡು ಸಂದೇಶಗಳ ಮೂಲಕ, ಪ್ರಧಾನಿ ಪದವಿಯನ್ನು ತನಗೆ ನೀಡಿದರೆ ತಾನು ಇಂಡಿಯಾ ಜೊತೆಗೂ ಹೋಗಲು ಸಿದ್ಧ ಎಂಬುದನ್ನು ನಿತೀಶ್ ಸಾರಿದ್ದಾರೆ ಎಂದು ಸಂದೇಹಿಸಲಾಗುತ್ತಿದೆ.