ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆಗೆ ಅವಮಾನ; ಸಿಟ್ಟಿಗೆದ್ದ ಫ್ಯಾನ್ಸ್
ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಕೇವಲ ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ಮಂದಿಗೂ ಪರಿಚಿತರು. ಅವರು ಇಂಗ್ಲಿಷ್ನ ‘ಎಕ್ಎಕ್ಸ್ಎಕ್ಸ್: ರಿಟರ್ನ್ ಆಫ್ ಕ್ಸಾಂಡರ್ ಕೇಜ್’ ಸಿನಿಮಾದಲ್ಲಿ ನಟಿಸಿದ್ದರು. ಈ ಮೂಲಕ ಹಾಲಿವುಡ್ಗೂ ಕಾಲಿಟ್ಟಿದ್ದರು.. ಇತ್ತೀಚೆಗೆ ನಡೆದ ಆಸ್ಕರ್ ಅವಾರ್ಡ್ (Oscar Award) ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದರು. ಆದರೆ, ಅವರಿಗೆ ಅವಮಾನ ಆಗಿದೆ. ಈ ಬಗ್ಗೆ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಸಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸೋಮವಾರ (ಮಾರ್ಚ್ 13) ಅಮೆರಿಕದ ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ಆಸ್ಕರ್ ಕಾರ್ಯಕ್ರಮ ನಡೆಯಿತು. ಈ ಅದ್ದೂರಿ ಕಾರ್ಯಕ್ರಮಕ್ಕೆ ವಿವಿಧ ದೇಶಗಳಿಂದ ಅತಿಥಿಗಳು ಬಂದಿದ್ದರು. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಈ ವೇದಿಕೆ ಮೇಲೆ ಆಸ್ಕರ್ ಗೆದ್ದಿತು. ಈ ಹಾಡಿನ ಪರ್ಫಾರ್ಮೆನ್ಸ್ಗೂ ಮೊದಲು ದೀಪಿಕಾ ಪಡುಕೋಣೆ ಅವರು ವೇದಿಕೆ ಏರಿ ಹಾಡಿನ ಬಗ್ಗೆ ವಿವರಣೆ ನೀಡಿದ್ದರು.
ದೀಪಿಕಾ ಆಸ್ಕರ್ ವೇದಿಕೆ ಏರಿದ ಫೋಟೋ ವೈರಲ್ ಆಗಿದೆ. ಅನೇಕರು ಅವರನ್ನು ದೀಪಿಕಾ ಎಂದು ಗುರುತಿಸಲೇ ಇಲ್ಲ. ಬದಲಿಗೆ ಬ್ರೇಜಿಲ್ ಮಾಡೆಲ್, ಡಿಸೈನರ್ ಕಮಿಲಾ ಆಲ್ವ್ಸ್ ಮೆಕ್ಕಾನಹೇ ಹೆಸರನ್ನು ಸೇರಿಸಲಾಗಿದೆ. ಆಸ್ಕರ್ ವೇದಿಕೆ ಏರಿದ್ದು ಕಮಿಲಾ ಆಲ್ವ್ಸ್ ಎಂದು ಅನೇಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದರಿಂದ ದೀಪಿಕಾಗೆ ಅವಮಾನ ಆಗಿದೆ ಎಂದು ಅನೇಕರು ಆರೋಪಿಸಿದ್ದಾರೆ. ಅಂದಹಾಗೆ ಕಮಿಲಾ ಅವರು ಹಾಲಿವುಡ್ನ ಖ್ಯಾತ ನಟ ಮ್ಯಾಥೀವ್ ಮೆಕ್ಕಾನಹೇ ಅವರನ್ನು ಮದುವೆ ಆಗಿದ್ದಾರೆ.
ಆಸ್ಕರ್ ವೇದಿಕೆ ಮೇಲೆ ‘ನಾಟು ನಾಟು..’ ಹಾಡಿನ ಪರ್ಫಾರ್ಮೆನ್ಸ್ಗೂ ಮೊದಲು ದೀಪಿಕಾ ಪಡುಕೋಣೆ ಅವರು ಈ ಹಾಡಿನ ಬಗ್ಗೆ ವಿವರಣೆ ನೀಡಿದ್ದರು. ಗ್ಲೋಬಲ್ ಸೆನ್ಸೇಷನ್ ಸೃಷ್ಟಿಸಿದ ಹಾಡು ‘ನಾಟು ನಾಟು..’ ಎಂದು ದೀಪಿಕಾ ಕರೆದಿದ್ದರು. ಅವರು ನಗುಮುಖದಲ್ಲೇ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಆಸ್ಕರ್ ವೇದಿಕೆ ಏರುವಾಗ ಕಪ್ಪು ಬಣ್ಣದ ಗೌನ್ನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಆದರೆ, ಈಗ ಅವರನ್ನು ಬೇರೆ ಹೆಸರಲ್ಲಿ ಕರೆದಿದ್ದು ಅನೇಕರಿಗೆ ಬೇಸರ ಮೂಡಿಸಿದೆ.