ಆಸ್ಕರ್ ಅರ್ಹತೆ ಸುತ್ತಿನಲ್ಲಿ ಕಾಣಿಸಿಕೊಂಡ ‘ಕಾಂತಾರ’ ಸಿನಿಮಾ
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಆಸ್ಕರ್ ಪ್ರಶಸ್ತಿಗಾಗಿ ಅರ್ಹತೆ ಸುತ್ತಿನಲ್ಲಿ ಸ್ಥಾನ ಪಡೆದಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ಎರಡು ವಿಭಾಗದಲ್ಲಿ ಅದು ಅರ್ಹತೆ ಸುತ್ತನ್ನು ಪಾಸು ಮಾಡಿದ್ದು, ಮುಂದಿನ ಹಂತಕ್ಕೆ ಸಿನಿಮಾ ಹೋಗಬೇಕಾದರೆ, ಆಸ್ಕರ್ ಸದಸ್ಯರು ಮತ ಚಲಾಯಿಸುವುದು ಕಡ್ಡಾಯವಾಗಿದೆ. ವಿಶ್ವದಾದ್ಯಂತ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತಿನಲ್ಲಿ ಪಾಸಾಗಿವೆ.
ಈ ಕುರಿತು ನಿರ್ದೇಶಕ ರಿಷಬ್ ಶೆಟ್ಟಿ ಟ್ವಿಟ್ ಮಾಡಿದ್ದು, ‘ಕಾಂತಾರ ಸಿನಿಮಾ ಆಸ್ಕರ್ ಅರ್ಹತೆಯ ಸುತ್ತಿನಲ್ಲಿ ಎರಡು ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ. ಈ ವಿಚಾರ ತಿಳಿಸಲು ಸಂತಸವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಅಲ್ಲದೇ, ಮುಂದಿನ ಹಂತಕ್ಕೆ ಹೋಗಿದ್ದು ಸಂಭ್ರಮ ತಂದಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸಿನಿಮಾ ಶತದಿನೋತ್ಸವ ಪೂರೈಸಿದೆ. ಸದ್ಯದಲ್ಲೇ ಅದು ಟಿವಿಯಲ್ಲೂ ಪ್ರಸಾರವಾಗಲಿದೆ. ಇಷ್ಟೊಂದು ಸಂಭ್ರಮಗಳೊಂದಿಗೆ ಚಿತ್ರತಂಡ ಕಾಂತಾರ 2 ಸಿನಿಮಾದ ಸಿದ್ಧತೆಯನ್ನು ಸದ್ದಿಲ್ಲದೇ ಮಾಡುತ್ತಿದೆ. ಈಗಾಗಲೇ ಚಿತ್ರಕಥೆಯನ್ನು ಬರೆಯುವುದರಲ್ಲಿ ಚಿತ್ರತಂಡ ತೊಡಗಿಕೊಂಡಿದೆ ಎನ್ನುವ ಮಾಹಿತಿ ಇದೆ. ಆದರೆ, ಈ ವಿಷಯವನ್ನು ಸಿನಿಮಾ ಟೀಮ್ ಬಹಿರಂಗ ಪಡಿಸುತ್ತಿಲ್ಲ.