ಆಸೀಸ್ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!
India vs Australia Final: ಭಾರತ ತನ್ನ ಪ್ರಥಮ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ. 318 ರನ್ಗಳ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ.
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final 2023) ರೋಚಕತೆ ಸೃಷ್ಟಿಸಿದೆ. ಮೊದಲ ದಿನ ಬ್ಯಾಟಿಂಗ್ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದ ಆಸ್ಟ್ರೇಲಿಯಾನ್ನರು ದ್ವಿತೀಯ ದಿನ ಬೌಲಿಂಗ್ನಲ್ಲಿ ಪಾರುಪತ್ಯ ಮೆರೆದರು.
ಮೊದಲ ಇನ್ನಿಂಗ್ಸ್ನಲ್ಲಿ ಕಾಂಗರೂ ಪಡೆ 469 ರನ್ ಕಲೆಹಾಕಿತು. ಆದರೆ, ಭಾರತ ತನ್ನ ಪ್ರಥಮ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ. 318 ರನ್ಗಳ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ (Team India) ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕಾಂಗರೂ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ಉಸ್ಮಾನ್ ಖ್ವಾಜಾ ಸೊನ್ನೆಗೆ ನಿರ್ಗಮಿಸಿದರು. ಮಾರ್ನಸ್ ಲಾಬುಶೇನ್ (26) ಹಾಗೂ ಡೇವಿಡ್ ವಾರ್ನರ್ (43) 69 ರನ್ಗಳ ಜೊತೆಯಾಟ ಆಡಿದರಷ್ಟೆ.
ನಂತರ ಶುರುವಾಗಿದ್ದು ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಆಟ. ಆಕ್ರಮಣಕಾರಿ ಆಟದ ಮೂಲಕ ಆರಂಭದಿಂದಲೇ ಭಾರತಕ್ಕೆ ಎಚ್ಚರಿಕೆ ನೀಡಿದ ಹೆಡ್ ಅವರನ್ನು ಕಟ್ಟಿಹಾಕಲು ರೋಹಿತ್ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾದವು. ಹೆಡ್ ಅವರು ಈ ಪ್ರತಿಷ್ಠಿತ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರು.
ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 327 ರನ್ ಕಲೆಹಾಕಿ ದೊಡ್ಡ ಮೊತ್ತದ ಮುನ್ಸೂಚನೆ ನೀಡಿತ್ತು. ಹೆಡ್ (146) ಹಾಗೂ ಸ್ಟೀವ್ ಸ್ಮಿತ್ (95) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇಂಡಿಯಾ ಪರ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದರು.