ಆರ್ಸಿಬಿ ತಂಡಕ್ಕೆ ಸತತ 5ನೇ ಸೋಲು; ಗೆಲುವಿನ ಖಾತೆ ತೆರೆಯಲು ವಿಫಲ!
DC vs RCB, WPL 2023: ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಎಲ್ಲಿಸ್ ಪೆರ್ರಿ (67) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 150 ರನ್ ಕಲೆಹಾಕಿತು.
ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಅದರಲ್ಲೂ ಅಂತಿಮ ಓವರ್ನಲ್ಲಿ ಡೆಲ್ಲಿಗೆ ಗೆಲ್ಲಲು 9 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಜೆಸ್ ಜೊನಾಸನ್ ಆರ್ಸಿಬಿ ಕೈಯಿಂದ ಜಯವನ್ನು ಕಸಿದುಕೊಂಡರು. ಅಲ್ಲದೆ 19.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ 5 ಪಂದ್ಯಗಳಲ್ಲೂ ಆರ್ಸಿಬಿ ತಂಡ ಸೋಲನುಭವಿಸಿದೆ. ಅಲ್ಲದೆ ಇದುವರೆಗೆ ಗೆಲುವಿನ ಖಾತೆ ತೆರೆಯಲು ವಿಫಲವಾಗಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಆರ್ಸಿಬಿ- 150/4 (20)
ಡೆಲ್ಲಿ ಕ್ಯಾಪಿಟಲ್ಸ್- 154/4 (19.4)