ಆರತಿ ಕೊಲೆ ಕೇಸ್ – ಹತ್ಯೆಗೈದ ಆರೋಪಿಯ ಶವ ಕೆರೆಯಲ್ಲಿ ಪತ್ತೆ

ಮಡಿಕೇರಿ: ಯುವತಿ ಆರತಿಯನ್ನು (Arathi) ಕೊಲೆಗೈದ ಆರೋಪಿ ತಿಮ್ಮಯ್ಯ (Thimmaiah) ಆತ್ಮಹತ್ಯೆಗೆ ಶರಣಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ವಿರಾಜಪೇಟೆ(Virajpet) ತಾಲ್ಲೂಕಿನ ಎರಡನೇ ರುದ್ರಗುಪ್ಪೆ ಗ್ರಾಮದಲ್ಲಿ ಇರುವ ತಿಮ್ಮಯ್ಯ ಅವರ ಮನೆ ಸಮೀಪದ ಕೆರೆಯಲ್ಲಿ ತಿಮ್ಮಯ್ಯನ ಮೃತದೇಹ ಪತ್ತೆಯಾಗಿದೆ.
ಭಾನುವಾರ ಕತ್ತಿಯಿಂದ ಕಡಿದು ಆರತಿಯನ್ನು ಹತ್ಯೆ ಬಳಿಕ ಕೆರೆಗೆ ಹಾರಿ ತಿಮ್ಮಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ತಿಮ್ಮಯ್ಯನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು.
ಎರಡು ದಿನಗಳಿಂದ ಕೆರೆಯಲ್ಲಿ ನಿರಂತರವಾಗಿ ಹುಡುಕಾಟ ನಡೆಸಿದರೂ ತಿಮ್ಮಯ್ಯನ ಮೃತದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಮಧ್ಯಾಹ್ನದ ಬಳಿಕ ಕೆರೆಯ ನೀರನ್ನು ಪಂಪ್‌ನಿಂದ ಖಾಲಿ ಮಾಡುತ್ತಿದ್ದಾಗ ತಡರಾತ್ರಿ ಮೃತದೇಹ ಪತ್ತೆಯಾಗಿದೆ.
ಕೆರೆಯಲ್ಲಿ ಹೆಚ್ಚಾಗಿ ಕೆಸರು ತುಂಬಿದ ಹಿನ್ನೆಲೆಯಲ್ಲಿ ಮೃತದೇಹ ಶೋಧಕಾರ್ಯದ ವೇಳೆ ಸುಲಭವಾಗಿ ಪತ್ತೆಯಾಗಿರಲಿಲ್ಲ. ಈಗ ಮೃತ ತಿಮ್ಮಯ್ಯನ ಮೃತದೇಹವನ್ನು ವಿರಾಜಪೇಟೆ ಸರ್ಕಾರಿ ಅಸ್ಪತ್ರೆಗೆ ಮರಣೋತ್ತರ ಪರೀಕ್ಷೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ರವಾನಿಸಿದ್ದಾರೆ.
ಆರತಿ ಕೊಲೆಯಾದ ಜಾಗದ ಸಮೀಪವೇ ತಿಮ್ಮಯ್ಯನ ಬೈಕ್, ಮೊಬೈಲ್, ಚಪ್ಪಲಿ ಪತ್ತೆಯಾಗಿತ್ತು. ಹತ್ಯೆ ಬಳಿಕ ತಿಮ್ಮಯ್ಯ ಕೂಡ ವಿಷ ಸೇವಿಸಿರುವ ಬಗ್ಗೆ ಅನುಮಾನ ಹುಟ್ಟಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಮೊಬೈಲ್ ದೊರೆತಿರುವ ಸ್ಥಳದಲ್ಲಿ ವಿಷದ ಬಾಟಲಿಯೂ ಸಿಕ್ಕಿತ್ತು.