ಆದಿಲ್ ಜತೆಗಿನ ಮದುವೆ ಫೋಟೋ ವೈರಲ್; ಮತ್ತೊಂದು ವಿವಾಹ ಆದ ರಾಖಿ ಸಾವಂತ್!
ರಾಖಿ ಸಾವಂತ್ (Rakhi Sawant) ಹಾಗೂ ಅವರ ಬಾಯ್ಫ್ರೆಂಡ್ ಆದಿಲ್ ಖಾನ್ ಮದುವೆ ಆಗಿರುವ ವಿಚಾರ ಈಗ ರಿವೀಲ್ ಆಗಿದೆ. ರಾಖಿ ಅವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಖಚಿತ ಪಡಿಸಿದ್ದಾರೆ. 2022ರ ಜುಲೈ 2ರಂದೇ ಈ ಮದುವೆ ನಡೆದಿದ್ದು, ಈ ವಿಚಾರವನ್ನು ಅವರು ಗುಟ್ಟಾಗಿ ಇಟ್ಟಿದ್ದರು. ಇತ್ತೀಚೆಗೆ ಆದಿಲ್ ಅವರು ಮಾಧ್ಯಮದ ಜತೆ ಮಾತನಾಡುತ್ತಾ ರಾಖಿ ಜತೆಗಿನ ಮದುವೆ ವಿಚಾರವನ್ನು ಅಲ್ಲಗಳೆದಿದ್ದರು. ಈ ಕಾರಣದಿಂದ ರಾಖಿ ಅವರು ಆದಿಲ್ ಜತೆ ಮದುವೆ ವಿಚಾರವನ್ನು ಸಾಕ್ಷಿ ಸಮೇತ ತೆರೆದಿಟ್ಟಿದ್ದಾರೆ.
ರಾಖಿ ಹಾಗೂ ಆದಿಲ್ ಹಲವು ಕಡೆಗಳಲ್ಲಿ ಒಟ್ಟಾಗಿ ಸುತ್ತಾಟ ನಡೆಸಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ, ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು.ಇದನ್ನು ಆದಿಲ್ ಅಲ್ಲಗಳೆದಿದ್ದರು. ಮಾಧ್ಯಮದವರಿಗೆ ಸ್ಪಷ್ಟನೆ ನೀಡುವಾಗ ರಾಖಿ ಜತೆ ಮದುವೆ ಆಗಿಲ್ಲ ಎಂಬ ಮಾತನ್ನು ಹೇಳಿದ್ದರು. ಈ ಬೆನ್ನಲ್ಲೇ ರಾಖಿ ಹೊಸ ಬಾಂಬ್ ಹಾಕಿದ್ದಾರೆ. ಮದುವೆ ಆಗಿರುವ ಫೋಟೋ ಹಾಗೂ ತಮ್ಮ ಮದುವೆ ಪ್ರಮಾಣ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ, ‘ನಾನು ಆದಿಲ್ನ ಮದುವೆ ಆಗಿದ್ದೇನೆ. ನನಗೆ ಖುಷಿ ಹಾಗೂ ಎಗ್ಸೈಟ್ಮೆಂಟ್ ಎರಡೂ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ನಾನು ಹಾಗೂ ಆದಿಲ್ ಕಳೆದ ಜುಲೈ ತಿಂಗಳಲ್ಲಿ ವಿವಾಹ ಆಗಿದ್ದೇವೆ. ಆದಿಲ್ ಪರಿಚಯಗೊಂಡು ಮೂರು ತಿಂಗಳಿಗೆ ಈ ಮದುವೆ ನಡೆದಿದೆ. ವಿವಾಹ ಕಾರ್ಯಕ್ರಮ ಹಾಗೂ ಕೋರ್ಟ್ನಲ್ಲಿ ನೋಂದಣಿ ಮಾಡಿಕೊಳ್ಳುವ ಕಾರ್ಯ ನಡೆದಿದೆ. ಈ ವಿಚಾರವನ್ನು ರಿವೀಲ್ ಮಾಡದಂತೆ ಆದಿಲ್ ಸೂಚಿಸಿದ್ದರು. ಹೀಗಾಗಿ, ನಾನು ಸುಮ್ಮನೆ ಇದ್ದೆ. ನಮ್ಮ ಮದುವೆ ನಡೆದ ವಿಚಾರ ಗೊತ್ತಾದರೆ ತನ್ನ ಸಹೋದರಿಗೆ ಹುಡುಗನನ್ನು ಹುಡುಕಲು ಕಷ್ಟವಾಗುತ್ತದೆ ಎಂಬುದು ಆತನ ಭಾವನೆ ಆಗಿತ್ತು. ರಾಖಿ ಸಾಂವತ್ ಜತೆ ಕಾಣಿಸಿಕೊಂಡರೆ ಅವಮಾನವನ್ನು ಆಹ್ವಾನಿಸಿದಂತೆ ಎಂಬುದು ಆದಿಲ್ ಅಭಿಪ್ರಾಯ’ ಎಂದಿದ್ದಾರೆ ರಾಖಿ.
‘ನನ್ನ ಮದುವೆಯನ್ನು ನಾನು ಉಳಿಸಿಕೊಳ್ಳಬೇಕಿದೆ. ಜಗತ್ತಿಗೆ ನಾನು ಮದುವೆ ಆಗಿದ್ದೀನೋ ಅಥವಾ ಇಲ್ಲವೋ ಎಂಬುದನ್ನು ಹೇಳಬೇಕಿತ್ತು’ ಎಂದಿದ್ದಾರೆ ರಾಖಿ ಸಾವಂತ್.
ರಾಖಿ ಸಾಂವತ್ ಅವರು ಈ ಮೊದಲು ರಿತೇಷ್ ರಾಜ್ ಅವರನ್ನು ಮದುವೆ ಆಗಿದ್ದರು. ಇಬ್ಬರೂ ‘ಬಿಗ್ ಬಾಸ್ ಹಿಂದಿ ಸೀಸನ್ 15’ಕ್ಕೆ ಒಟ್ಟಿಗೆ ಬಂದಿದ್ದರು. ಇವರ ಸಂಬಂಧ ಮುರಿದುಬಿದ್ದಿತ್ತು. ರಿತೇಷ್ ಅವರಿಂದ ಹಿಂಸೆಗೆ ಒಳಗಾಗಿದ್ದೆ ಎಂದು ರಾಖಿ ಹೇಳಿಕೊಂಡಿದ್ದರು. ಈಗ ತಾವು ಆದಿಲ್ ಜತೆ ಮದುವೆ ಆಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಆದಿಲ್ ಕುಟುಂಬದವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.