ಆಟವಾಡಿ ಬಂದು ಮಲಗಿದ್ದ ಬಾಲಕಿ ಹೃದಯಾಘಾತದಿಂದ ಸಾವು
ಹೈದರಾಬಾದ್: ಇತ್ತೀಚಿಗೆ ಹೋದಲ್ಲಿ ಬಂದಲ್ಲಿ ಹೃದಯಘಾತವಾಗಿ ಜನರು ಕುಸಿದುಬಿದ್ದು ಸಾವನ್ನಪ್ಪೋದು ಸಾಮಾನ್ಯವಾಗಿದೆ. ಮಕ್ಕಳು, ಹಿರಿಯರು, ವೃದ್ಧರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲರೂ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗುತ್ತಿದ್ದಾರೆ. ಮಹಬೂಬಾಬಾದ್‌ನ ಮಾರಿಪೇಡಾ ಮಂಡಲದ ಅಬ್ಬೈಪಾಲೆಂ ಗ್ರಾಮದಲ್ಲಿ ನಿನ್ನೆ ಮುಂಜಾನೆ 13 ವರ್ಷದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. 6ನೇ ತರಗತಿಯ ವಿದ್ಯಾರ್ಥಿನಿ ಶ್ರವಂತಿ ಗುರುವಾರ ರಾತ್ರಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು. ಮನೆ ಮಂದಿ ಇದನ್ನು ನೋಡಿ ವೈದ್ಯರ ಬಳಿಗೆ ಕರೆದೊಯ್ಯುವ ಮುನ್ನವೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಆಟ ಆಡಿ ಬಂದು ಮಲಗಿದ್ದ ಬಾಲಕಿಗೆ ಹೃದಯಾಘಾತ
ಗುರುವಾರ ರಾತ್ರಿ ಮಲಗಿದ ಕೆಲವು ಗಂಟೆಗಳ ನಂತರ, 12.30 ರ ಸುಮಾರಿಗೆ ಬಾಲಕಿಗೆ (Girl)ಎಚ್ಚರವಾಯಿತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಅವಳು ತನ್ನ ಎದೆಯಲ್ಲಿ ನೋವು (Chest pain) ಅನುಭವಿಸುತ್ತಿರುವುದನ್ನು ತನ್ನ ಅಜ್ಜಿಗೆ ತಿಳಿಸಿದಳು. ಕುಟುಂಬದ ಸದಸ್ಯರು ಅವಳನ್ನು ವೈದ್ಯರ ಬಳಿಗೆ ಕರೆದೊಯ್ಯಲು ಆಟೋವನ್ನು ಕರೆತರುವ ಹೊತ್ತಿಗೆ, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಾಲಕಿ ಸಾವನ್ನಪ್ಪಿದಳು ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಯ ಚಿಕ್ಕಪ್ಪ ಅವಳಿಗೆ ಸಿಪಿಆರ್ ನೀಡಲು ಪ್ರಯತ್ನಿಸಿದರೂ ಯಶಸ್ವಿಯಾಗಲ್ಲಿಲ್ಲ.
ಗುರುವಾರ ಶ್ರೀರಾಮ ನವಮಿ ನಿಮಿತ್ತ ಶಾಲೆಗಳಿಗೆ ರಜೆ ಇದ್ದ ಕಾರಣ ಬಾಲಕಿ ತನ್ನ ಸ್ನೇಹಿತರೊಂದಿಗೆ ಆಟವಾಡಿ ಅಜ್ಜಿಯ ಮನೆಯಲ್ಲಿ ಮಲಗಿದ್ದಳು. ಆಕೆ ಮಾರಿಪೇಡಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಬಾಲಕಿಯ ಪೋಷಕರು (Parents) ಕೃಷಿಕರಾಗಿದ್ದ, ಈಕೆ ಎರಡನೇ ಮಗಳು. ಇನ್ನೂ ಬಾಳಿ ಬದುಕಬೇಕಿದ್ದ ಮಗಳ ಸಾವಿನಿಂದ ಕುಟುಂಬದಲ್ಲಿ (Family) ಶೋಕ ಆವರಿಸಿದೆ. ತೆಲಂಗಾಣದಲ್ಲಿ ಕಳೆದ 1-2 ತಿಂಗಳಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಹಠಾತ್ ಹೃದಯಾಘಾತಕ್ಕೆ (Heartattack) ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ.