ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಮೇಲುಗೈ; ಮೋದಿಯಿಂದ ಕರೆ, ಬಿಜೆಪಿಗೆ ಬೆಂಬಲ ಬಹುತೇಕ ಖಚಿತ..!
ಲೋಕಸಭೆ ಚುನಾವಣೆ ಫಲಿತಾಂಶ ಬಹುತೇಕ ಘೋಷಣೆಯಾಗಿದ್ದು ಈ ಬಾರಿ ಬಿಜೆಪಿಗೆ 240 ಸ್ಥಾನಗಳು ಸೇರಿ NDAಗೆ 295 ಸ್ಥಾನಗಳ ಸರಳ ಬಹುಮತ ಸಿಗುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಿದೆ. ಈ ಬಾರಿ ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಆಗುವ ಸಾಧ್ಯತೆ ಹೆಚ್ಚಿದೆ.
ಈ ಬಾರಿ ಆಂಧ್ರದಲ್ಲಿ ಟಿಡಿಪಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ವಿಧಾನಸಭೆಯಲ್ಲಿ ಏಕಾಂಗಿಯಾಗಿ ಸರ್ಕಾರ ರಚಿಸಲಿದೆ. ಎನ್ಡಿಎ ಮೈತ್ರಿಕೂಟ ಪಕ್ಷವಾದ ಟಿಡಿಪಿ 133, ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ 21 ಹಾಗೂ ಬಿಜೆಪಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಕಳೆದ ಬಾರಿ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿದ್ದ ಜಗನ್ ರೆಡ್ಡಿ ನೇತೃತ್ವದ YSRCP ಪಕ್ಷ ಕೇವಲ 15 ಸ್ಥಾನಗಳಿಗೆ ಕುಸಿದಿದೆ. ಈ ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ಟಿಡಿಪಿ 16 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 240 ಸ್ಥಾನಗಳನ್ನು ಪಡೆದುಕೊಂಡಿರುವ ಬಿಜೆಪಿ ನೇತೃತ್ವದ ಎನ್ಡಿಎಗೆ 295 ಸ್ಥಾನಗಳು ಬಂದಿದೆ. ಹೀಗಾಗಿ ಸರ್ಕಾರ ರಚಿಸಬೇಕಾದರೆ ಮಿತ್ರಪಕ್ಷಗಳ ಬೆಂಬಲ ಮುಖ್ಯವಾಗುತ್ತದೆ.
ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಿತ್ರಪಕ್ಷಗಳ ನಾಯಕರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಇದೇ ವೇಳೆ ಚಂದ್ರಬಾಬು ನಾಯ್ಡುಗೆ ಎನ್ ಡಿಎ ಮೈತ್ರಿಕೂಟದ ಸಂಚಾಲಕನ ಹುದ್ದೆಯನ್ನು ಆಫರ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ಬಂದಿರುವುದಕ್ಕೆ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿ ಅಮಿತ್ ಶಾ ಅವರನ್ನು ಅಭಿನಂದಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟದ ಭವ್ಯ ವಿಜಯಕ್ಕಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಚಂದ್ರಬಾಬು ನಾಯ್ಡು ಅವರನ್ನು ಅಭಿನಂದಿಸಿದ್ದಾರೆ ಎಂದು ಟಿಡಿಪಿ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಪಕ್ಷವನ್ನು ಒಳಗೊಂಡಿರುವ ಎನ್‌ಡಿಎ 175 ಸದಸ್ಯ ರಾಜ್ಯ ವಿಧಾನಸಭೆಯ 157 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವಿನತ್ತ ಸಾಗುತ್ತಿದೆ.