ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್ಡಿ ರೇವಣ್ಣ ಎಸ್ಐಟಿ ವಶಕ್ಕೆ..!
ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣರನ್ನು (HD Revanna) ವಿಶೇಷ ತನಿಖಾ ದಳದ (SIT) ಅಧಿಕಾರಿಗಳು ಶನಿವಾರ ಸಂಜೆ ವಶಕ್ಕೆ ಪಡೆದರು. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ನಿವಾಸದಿಂದ ರೇವಣ್ಣರನ್ನು ವಶಕ್ಕೆ ಪಡೆದ ಅಧಿಕಾರಿಗಳು ನೇರವಾಗಿ ಎಸ್ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ದಾಖಲಾದ ಅಪಹರಣ, ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣರನ್ನು ಎಸ್ಐಟಿ ವಶಕ್ಕೆ ಪಡೆದಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ರೇವಣ್ಣರ ಬಂಧನಕ್ಕೆ ಎಸ್ಐಟಿ ಅಧಿಕಾರಿಗಳು ತಲಾಶ್ ನಡೆಸಿದರು. ಇದೇ ವೇಳೆ ಅವರು, ದೇವೇಗೌಡರ ನಿವಾಸದಲ್ಲಿರುವುದು ತಿಳಿದು ಎರಡು ಕಾರುಗಳಲ್ಲಿ ಅಲ್ಲಿಗೆ ದೌಡಾಯಿಸಿದರು. ಸುಮಾರು ಐದಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ರೇವಣ್ಣ ಬಂಧನಕ್ಕೆ ತೆರಳಿದ್ದರು. ಅಧಿಕಾರಿಗಳು ಬಂದು 15 ನಿಮಿಷವಾದ್ರೂ ಮನೆ ಬಾಗಿಲು ಓಪನ್ ಮಾಡಲಾಗಿರಲಿಲ್ಲ. ನಂತರ ರೇವಣ್ಣರೇ ಬಾಗಿಲು ತೆರೆದು ಹೊರಬಂದರು. ತಕ್ಷಣವೇ ಅವರನ್ನು ವಶಕ್ಕೆ ಪಡೆದು ಎಸ್ಐಟಿ ಅಧಿಕಾರಿಗಳು ಕಚೇರಿಯತ್ತ ತೆರಳಿದರು.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರೆ ಬಣ್ಣ, ಬಂಧಿಸುವಂತಹ ಪ್ರಕರಣ ಯಾವುದು ದಾಖಲಾಗಿಲ್ಲ ಎಂದು ವಿಶೇಷ ತನಿಖಾ ತಂಡದ ವಕೀಲರು ಖಚಿತಪಡಿಸಿದ್ದರಿಂದ ಶುಕ್ರವಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ಪಡೆದಿದ್ದರು. ಆದರೆ ನಂತರ, ಮೈಸೂರಿನ ಕೆಆರ್ ನಗರದಲ್ಲಿ ದಾಖಲಾದ ಅಪಹರಣ ಪ್ರಕರಣದಲ್ಲಿ ರೇವಣ್ಣಗೆ ಬಂಧನ ಭೀತಿ ಎದುರಾಗಿತ್ತು. ಹೀಗಾಗಿ ಅವರು ಮತ್ತೆ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅಲ್ಲಿ ಅವರಿಗೆ ಹಿನ್ನಡೆಯಾಗಿತ್ತು.