ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ತಿರುವನಂತಪುರಂ: ತನ್ನ ಅಪ್ರಾಪ್ತ ಮಗಳ (Minor Daughter) ಮೇಲೆ ಪದೇ ಪದೇ ಅತ್ಯಾಚಾರವೆಸಗಿ (Rape), ಆಕೆಯನ್ನು ಗರ್ಭಿಣಿ (Pregnant) ಮಾಡಿದ್ದ ವ್ಯಕ್ತಿಗೆ ಕೇರಳ ನ್ಯಾಯಾಲಯ (Kerala Court) 3 ಜೀವಾವಧಿ ಶಿಕ್ಷೆ ವಿಧಿಸಿದೆ.
ಮಂಜೇರಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಕೆ ವ್ಯಕ್ತಿಯನ್ನು ದೋಷಿಯೆಂದು ಪ್ರಕಟಿಸಿದ್ದಾರೆ. ಐಪಿಸಿ ಸೆಕ್ಷನ್ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ (POCSO) ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಈ ಎಲ್ಲಾ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ 3 ಜೀವಾವಾಧಿ ಶಿಕ್ಷೆಯ ಜೊತೆಗೆ 6.6 ಲಕ್ಷ ರೂ. ದಂಡವನ್ನು ವಿಧಿಸಿದೆ.
ಪ್ರಕರಣದ ಬಗ್ಗೆ ವಿವರಣೆ ನೀಡಿದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಎ ಸೋಮಸುಂದರನ್, ಅಪರಾಧಿ ಮದರಸಾದಲ್ಲಿ ಶಿಕ್ಷಕನಾಗಿದ್ದು, ಮೊದಲ ಬಾರಿಗೆ 2021ರ ಮಾರ್ಚ್ನಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ 15 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದ. ಆ ಸಂದರ್ಭ ಕೋವಿಡ್-19 ಇದ್ದಿದ್ದರಿಂದ ಬಾಲಕಿ ಆನ್ಲೈನ್ ತರಗತಿಯಲ್ಲಿ ಓದುತ್ತಿದ್ದಳು. ಈ ಸಂದರ್ಭ ಆತ ಮಗಳನ್ನು ತನ್ನ ಮಲಗುವ ಕೋಣೆಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದ ಎಂದು ವಾದಿಸಿದ್ದರು.
ತಂದೆಯ ಕೃತ್ಯವನ್ನು ಸಂತ್ರಸ್ತೆ ವಿರೋಧಿಸಿದಾಗ ಆಕೆಯ ತಾಯಿಯನ್ನು ಕೊಲ್ಲುವುದಾಗಿ ಆತ ಬೆದರಿಕೆ ಹಾಕಿದ್ದ. ಆತ 2021ರ ಅಕ್ಟೋಬರ್ವರೆಗೂ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತನ್ನ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.
2021ರಲ್ಲಿ ಆನ್ಲೈನ್ ತರಗತಿಗಳು ಮುಕ್ತಾಯವಾಗಿ ಶಾಲೆಗಳು ಪುನರಾರಂಭವಾದಾಗ ಬಾಲಕಿ ಶಾಲೆಗೆ ಹೋಗಲು ಪ್ರಾರಂಭಿಸಿದ್ದಾಳೆ. ಈ ವೇಳೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ ಸಂದರ್ಭ ಏನೂ ಪತ್ತೆಯಾಗಿರಲಿಲ್ಲ. 2022ರ ಜನವರಿಯಲ್ಲಿ ಆಕೆಗೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವೈದ್ಯರಲ್ಲಿಗೆ ಕರೆದುಕೊಂಡು ಹೋದಾಗ ಆಕೆ ಗರ್ಭಿಣಿ ಎಂಬುದು ತಿಳಿದುಬಂದಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತ ಬಾಲಕಿಯ ತಂದೆಯನ್ನು ಬಂಧಿಸಿದ್ದರು. ಬಳಿಕ ಸಂತ್ರಸ್ತೆಯ ಗರ್ಭಪಾತ ಮಾಡಿಸಲಾಗಿದ್ದು, ಭ್ರೂಣದ ಡಿಎನ್ಎ ಸಂಗ್ರಹಿಸಿ ಆಕೆಯ ತಂದೆಯ ಡಿಎನ್ಎಯೊಂದಿಗೆ ವಿಶ್ಲೇಷಣೆ ಮಾಡಲಾಗಿತ್ತು. ಇದರಿಂದ ಬಾಲಕಿಯ ತಂದೆಯೇ ಅಪರಾಧಿ ಎಂಬುದು ಸಾಬೀತಾಗಿತ್ತು.