ಅಣ್ಣನ ಮಗಳನ್ನು ಮದುವೆಯಾದ ಯುವಕ; ಈ ವಿವಾಹಕ್ಕೆ ಗ್ರಾಮಸ್ಥರಿಂದ ವಿರೋಧ
ಉತ್ತರಪ್ರದೇಶ ಅಣ್ಣನ ಮಗಳನ್ನು ಮದುವೆಯಾದ ಯುವಕ: ಯುವಕನೊಬ್ಬ ತನ್ನ ಸ್ವಂತ ಅಣ್ಣನ ಮಗಳನ್ನು ಮದುವೆಯಾಗಿರುವ ಘಟನೆ ಉತ್ತರಪ್ರದೇಶದ ಜೌನ್‌ಪುರ ಜಿಲ್ಲೆಯ ತಾಜುದ್ದೀನ್‌ಪುರ ಗ್ರಾಮದಲ್ಲಿ ನಡೆದಿದೆ.
ಶುಭಂ, ತನ್ನ ಅಣ್ಣನ ಮಗಳಾದ ರಿಯಾಳನ್ನು ಮಡಿಯಾಹುನ್ ಕೊಟ್ವಾಲಿ ಪ್ರದೇಶದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ತಮ್ಮ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಮೊದಲು ಈ ವಿವಾಹಕ್ಕೆ ಇಬ್ಬರ ಮನೆಯವರು ಕೂಡ ವಿರೋಧ ವ್ಯಕ್ತಪಡಿಸಿದ್ದರು, ಆದರೆ ಶುಭಂ ಮತ್ತು ರಿಯಾ ಈ ಮೊದಲೇ ನಾವು ಪ್ರೀತಿ ಮಾಡುತ್ತಿದ್ದೇವೆ, ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದು ಗಟ್ಟಿ ತೀರ್ಮಾನವನ್ನು ಮಾಡಿಕೊಂಡಿದ್ದರು. ಈ ಕಾರಣಕ್ಕೆ ಮನೆಯವರು ಕೂಡ ಈ ಮದುವೆಗೆ ಒಪ್ಪಿಗೆ ನೀಡಿದ್ದಾರೆ.
ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ಧರ್ಮಕ್ಕೆ ಇದು ವಿರುದ್ಧವಾಗಿದೆ. ನಮ್ಮ ಧರ್ಮದ ಪ್ರಕಾರ ಅಣ್ಣನ ಮಗಳು ಆತನಿಗೂ ಮಗಳು, ಇದು ಪಾಪ ಮದುವೆ, ಇದನ್ನು ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಮದುವೆಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಮದುವೆಯನ್ನು ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಭಂ ಮತ್ತು ರಿಯಾ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಇದೀಗ ನಾವು ಸ್ವಇಚ್ಫೆಯಿಂದ ಮದುವೆಯಾಗಿದ್ದೇವೆ, ಆಕೆ ನನ್ನ ಅಣ್ಣನ ಮಗಳು, ನಾನು ಅವಳಿಗೆ ಚಿಕ್ಕಪ್ಪ ಆಗಬೇಕು ಎಂದು ಶುಭಂ ಹೇಳಿದ್ದಾರೆ.
ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಕಾರು; ಚಾಲಕನಿಗಾಗಿ ಹುಡುಕಾಟ
ಮಂಡ್ಯ, ಜು.27: ತಾಲೂಕಿನ ತಿಬ್ಬನಹಳ್ಳಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಘಟನೆ ನಡೆದಿದೆ. ಮಂಡ್ಯ (Mandya) ದ ಶಿವಳ್ಳಿ ಗ್ರಾಮದ ಲೋಕೇಶ್ ಎಂಬಾತ ನಿನ್ನೆ ಮೈಸೂರಿಗೆ ಹೋಗಬೇಕು ಎಂದು ಸ್ನೇಹಿತ ಮೋಹನ್ ಬಳಿ ಕಾರು ತೆಗೆದುಕೊಂಡು ಹೋಗಿದ್ದ. ಇದೀಗ ಕಾರು ವಾಪಾಸ್ ಕೊಡಲು ಶಿವಳ್ಳಿಯಿಂದ ತಿಬ್ಬನಹಳ್ಳಿಗೆ ಹೋಗುವಾಗ ಈ ಘಟನೆ ನಡೆದಿದೆ. ಸುಮಾರು 18 ಅಡಿ ಆಳ ಇರುವ ಈ ವಿಸಿ ನಾಲೆಗೆ ಬಿದ್ದ ನಂತರ ಲೋಕೇಶ್ ಕಾರಿನ ಮೇಲೆ ಹತ್ತು ಕುಳಿತಿದ್ದನಂತೆ. ಆನಂತರ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ
ಇನ್ನು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯವರು ಕಾರನ್ನ ಮೇಲಕ್ಕೆ ಎತ್ತುವ ಕಾರ್ಯದಲ್ಲಿ ತೊಡಗಿದ್ದು, ಕಾರಿನಲ್ಲಿ ಮತ್ತೆ ಯಾರಾದರೂ ಇದ್ದರಾ? ಎಂಬ ಅನುಮಾನ ಮೂಡಿದೆ. ಇನ್ನು ಲೊಕೇಶ್ ಈಜು ಬಾರದೇ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿಸಿ ನಾಲೆಗೆ ನೀರು ಬಿಟ್ಟಿದ್ದರು. ಈ ಕುರಿತು ಶಿವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲದಲ್ಲಿ ಸರಣಿ ಕಳ್ಳತನ
ಬೆಂಗಳೂರು ಗ್ರಾಮಾಂತರ: ನೆಲಮಂಗಲದಲ್ಲಿ ಸರಣಿ ಕಳ್ಳತನ ನಡೆದಿದೆ. ಭೂಮಿಕಾ ಮಿಲ್ಟ್ರಿ ಹೋಟೆಲ್ನಲ್ಲಿ 10 ಸಾವಿರ, ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಕಳ್ಳತನಕ್ಕೆ ಯತ್ನ ಸೇರಿದಂತೆ ಮೂರು ಕಡೆಗಳಲ್ಲಿ ಕಳ್ಳತನ ನಡೆದಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಗಸ್ತು ಹೆಚ್ಚಿಸುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.